ಬೆಂಗಳೂರು: ಸರಕಾರದ ಅಧಿಕೃತ ಕೆಲಸಗಳಿಗೆ ಹೆಲಿಕಾಪ್ಟರ್ ಮತ್ತು ವಿಮಾನ ಖರೀದಿ ಕುರಿತು ನಿನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆದರೆ ಸರ್ಕಾರದ ಈ ನಿರ್ಣಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಆಗ್ಗಾಗೆ ಚರ್ಚೆ ಬರುತ್ತಿದ್ದ ವಿಮಾನ, ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆ ಯುವ ಪ್ರಕ್ರಿಯೆ ನಡೆಸುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿಗಳು ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಸ್ತೆ ಮಾರ್ಗಕ್ಕಿಂತ ಹೆಚ್ಚಾಗಿ ವಾಯು ಮಾರ್ಗವನ್ನು ಬಳಸುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಖಾಸಗಿ ಜೆಟ್ ಅಥವಾ ಹೆಲಿಕಾಪ್ಟರ್‌ನ ಬಾಡಿಗೆಯನ್ನು ಸರಕಾರವೇ ಭರಿಸಬೇಕು. ಈ ರೀತಿ ಬಾಡಿಗೆ ಪಡೆದು ಪ್ರಯಾಣಿಸುವುದಕ್ಕಿಂತ ಸ್ವಂತ ವಿಮಾನ ಹಾಗೂ ಹೆಲಿಕಾಪ್ಟರ್ ಖರೀದಿಸಿದರೆ ಆರ್ಥಿಕ ಹೊರೆ ತಪ್ಪಿಸ ಬಹುದು ಎನ್ನುವ ಲೆಕ್ಕಾಚಾರಗಳಿವೆ.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿ.ವೈ. ವಿಜಯೇಂದ್ರ ಅವರು, ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ, ಹೊಸ ಹೊಸ ಯೋಜನೆ ರೂಪಿಸಲು ಹಣವಿಲ್ಲ, ಸಮಯಕ್ಕೆ ಸರಿಯಾಗಿ ಸರ್ಕಾರಿ ನೌಕರರ ಸಂಬಳಕೊಡಲಾಗುತ್ತಿಲ್ಲ, ಆಪತ್ಕಾಲದಲ್ಲಿ ಜೀವನ್ಮರಣದೊಂದಿಗೆ ಹೋರಾಡುವ ರೋಗಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಹಣವೂ ಸಕಾಲದಲ್ಲಿ ತಲುಪುತ್ತಿಲ್ಲ, ಕನಿಷ್ಠ ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನೂ ಕೊಡಲಾಗುತ್ತಿಲ್ಲ, ಇಂತಹ ದಯನಿಯ ಆರ್ಥಿಕ ಸ್ಥಿತಿಯಲ್ಲಿರುವ ಕಾಂಗ್ರೆಸ್ ಸರ್ಕಾರ ‘5 ಸೀಟರ್ ನ ಹೆಲಿಕಾಪ್ಟರ್ ಹಾಗೂ 13 ಸೀಟರ್ ಜೆಟ್’ ಖರೀದಿಸಲು ಹೊರಟಿರುವುದು ಅತ್ಯಂತ ವಿಪರ್ಯಾಸ. ಇದು “ಹೊಟ್ಟೆಗೆ ಇಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು” ಎಂಬ ಗಾದೆ ನೆನಪಿಸುವಂತಿದೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೋಜಿನ ಕಾರ್ಯಕ್ರಮಗಳು, ಸ್ವಪ್ರತಿಷ್ಠೆ ಮೆರೆಯಲು ಸಮಾವೇಶಗಳನ್ನು ಆಯೋಜಿಸಿ ಪ್ರತಿಷ್ಠೆ ಮೆರೆಯಲು ಸರ್ಕಾರದ ಖಜಾನೆ ಖಾಲಿ ಮಾಡಿದೆ.
ಜನರ ತೆರಿಗೆ ಹಣದಲ್ಲಿ ದುಂದು ವೆಚ್ಚ ಮಾಡಲು ತೆರಿಗೆ ಹಾಗೂ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಸುತ್ತಲೇ ಇದೆ. ಜನ ಅಧಿಕಾರ ಕೊಡುವುದು ಜನಸೇವೆಗಾಗಿ ಎಂಬ ಸಿದ್ಧಾಂತದ ನೆನಪು ಕಾಂಗ್ರೆಸ್ಸಿಗರಿಗೆ ಎಂದೂ ಬರುವುದಿಲ್ಲ.
ರಾಜ್ಯ ಹಾಗೂ ಜನತೆಯ ಮುಂದೆ ಸಾಲು, ಸಾಲು ಸವಾಲುಗಳಿವೆ, ಜನರ ಸಂಕಷ್ಟ ವಿಪರೀತಕ್ಕೆ ಹೋಗುತ್ತಿದೆ, ಮೊದಲು ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸಲಿ, ತುರ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿ, ಸದ್ಯ ವೆಚ್ಚ ಉಳಿಸುವ ನೆಪದಲ್ಲಿ ಹೆಲಿಕಾಪ್ಟರ್ ಹಾಗೂ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯಲಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ.