ಬೆಂಗಳೂರು: ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ, ಜಿಎಸ್‌ಟಿ (GST) ಕೌನ್ಸಿಲ್ ಅನುಮೋದಿಸಿರುವ ಸುಧಾರಣಾ ಕ್ರಮಗಳು ಸ್ವಾಗತಾರ್ಹ, ಶ್ಲಾಘನೀಯ ಮಾತ್ರವಲ್ಲ, ಜನರ ಜೀವನಮಟ್ಟದಲ್ಲಿ ಮಹತ್ವಪೂರ್ಣ ಪರಿವರ್ತನೆ ಉಂಟುಮಾಡಬಲ್ಲ ಐತಿಹಾಸಿಕ ತೀರ್ಮಾನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y. Vijayendra) ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಈ ಸುಧಾರಣೆಗಳು ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಕೇಂದ್ರ ಸರ್ಕಾರದ ಮತ್ತೊಂದು ಮಹತ್ವಪೂರ್ಣ ಮೈಲಿಗಲ್ಲಾಗಿದೆ. ದೇಶದ ಜನತೆಗೆ ದಸರಾ, ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಸಂಭ್ರಮದ ಕೊಡುಗೆ ನೀಡಿದೆ.
ವಿಶೇಷವಾಗಿ ನಮ್ಮ ಅನ್ನದಾತ ರೈತರಿಗೆ ನೆರವಾಗಲು ರಸಗೊಬ್ಬರ ಇತ್ಯಾದಿಗಳ ಮೇಲಿನ GST ತೆರಿಗೆಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಕೆ ಮಾಡಲಾಗಿದೆ. ಈ ಪರಿವರ್ತನಾತ್ಮಕ ಕ್ರಮಗಳು ನಾಗರಿಕರ ಜೀವನ ಮಟ್ಟವನ್ನು ಸುಧಾರಿಸಲಿದೆ, ಸಣ್ಣ ಮತ್ತು ಮಾಧ್ಯಮ ವರ್ಗದ ಉದ್ಯಮಗಳ ವ್ಯವಹಾರವನ್ನು ಮತ್ತಷ್ಟು ಸುಗಮಗೊಳಿಸಲಿದ್ದು, ಸ್ಥಳೀಯ ಉತ್ಪಾದನೆ ಮತ್ತು ಉದ್ಯಮಶೀಲತೆಗೆ ಮತ್ತಷ್ಟು ಶಕ್ತಿ ನೀಡಿದೆ.
ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು, ಎಲ್ಲರನ್ನೂ ಒಳಗೊಂಡಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯದಂತೆ, ಈ ಅಭಿವೃದ್ಧಿ ಕೇಂದ್ರಿತ ಜನಾನುರಾಗಿ ನಿರ್ಣಯಗಳಿಗಾಗಿ ಮತ್ತೊಮ್ಮೆ ಮಾನ್ಯ ಪ್ರಧಾನಮಂತ್ರಿಗಳಿಗೆ, ಮಾನ್ಯ ಕೇಂದ್ರ ವಿತ್ತ ಸಚಿವರಿಗೆ ಮತ್ತು ಜಿಎಸ್‌ಟಿ ಮಂಡಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.