ದೊಡ್ಡಬಳ್ಳಾಪುರ: ನಗರದ ಸರಸ್ವತಿ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು (Teachers’ Day) ಸಂಭ್ರಮದಿಂದ ಆಚರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿಯಾದ ಮಂಜುಳಾ ಸುಬ್ರಮಣ್ಯ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿ ಒಂದು ಪವಿತ್ರ ವೃತ್ತಿ, ಎಲ್ಲರೂ ಸಮರ್ಪಣಾ ಭಾವದಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಎ. ಸುಬ್ರಮಣ್ಯ ಅವರು ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಶಿಕ್ಷಕ ಸಮಾಜದ ನಿರ್ಮಾತೃ. ಇಂಜಿನಿಯರ್ ಆಗಿರಲಿ, ಡಾಕ್ಟರ್ ಆಗಿರಲಿ ಬೇರೆ ಇನ್ಯಾವುದೇ ರಂಗದ ಉನ್ನತ ಅಧಿಕಾರಿಗಳಾಗಿರಲಿ ಒಂದು ಕಾಲದಲ್ಲಿ ಅವನು ವಿದ್ಯಾರ್ಥಿಯಾಗಿಯೇ ಇರುತ್ತಾನೆ.

ವಿದ್ಯಾರ್ಥಿಗಳ ಉನ್ನತ ಅಭ್ಯುದಯಕ್ಕೆ ಶಿಕ್ಷಕರ ಕಾಯಾ, ವಾಚ, ಮನಸಾ ಶ್ರಮವೇ ಕಾರಣವಾಗಿರುತ್ತದೆ ಎಂದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ, ಶಿಕ್ಷಕಿಯರಿಗಾಗಿ ಗೀತ ಗಾಯನ, ಏಕಪಾತ್ರಾಭಿನಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ ಮನೋರಂಜನ ಕ್ರೀಡೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ವಿದ್ಯಾರ್ಥಿಗಳು ತಮ್ಮ ಶಿಕ್ಷಕ, ಶಿಕ್ಷಕಿಯರ ಬಹುಮುಖ ಪ್ರತಿಭೆಗಳನ್ನು ಕಂಡು ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಶಿಕ್ಷಕ, ಶಿಕ್ಷಕರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಬಿ.ಕೆ. ಸಂಪತ್ ಕುಮಾರ್, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಇದ್ದರು.
