ಬೆಂಗಳೂರು: “ತಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಕೆಲವರು ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆ ವಿರೋಧಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ತಿರುಗೇಟು ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹೈ ಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ಸಿಎಂ ಈಗಾಗಲೇ ಉತ್ತರ ನೀಡಿದ್ದಾರೆ. ಅವರ ಪಕ್ಷ ಅವರನ್ನು (ಪ್ರತಾಪ್ ಸಿಂಹ) ಕಡೆಗಣಿಸಿದೆ. ಪಾಪ ಆತನಿಗೂ ರಾಜಕೀಯ ಮಾಡಬೇಕಿದೆ. ಹೀಗಾಗಿ ತನ್ನ ಅಸ್ತಿತ್ವ ತೋರಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದಾರೆ. ಈ ಬಗ್ಗೆ ಕೋರ್ಟ್ ವಿಚಾರಣೆ ಮಾಡಿ, ತೀರ್ಮಾನ ಮಾಡಲಿದೆ” ಎಂದರು.
ನಾಡ ಹಬ್ಬ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಇದರ ಹೊರತಾಗಿ ರಾಜಕೀಯ ಮಾಡಲು ಅವರಿಗೆ ಬೇರೆ ವಿಚಾರ ಇಲ್ಲ. ಅವರಿಗೆ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಬೆಂಗಳೂರು ಅಭಿವೃದ್ಧಿಗೆ ಅನುದಾನ, ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಅನುಮತಿ, ನರೇಗಾ ಅನುದಾನ ಕೊಡಿಸಲಿ. ಅದನ್ನು ಬಿಟ್ಟು ಈ ರೀತಿ ಖಾಲಿ ಮಾತು ಆಡೋದು ಬೇಡ. ಕೇವಲ ಪ್ರಚಾರಕ್ಕೆ ಅವರೆಲ್ಲ ಹೀಗೆ ರಾಜಕೀಯ ಮಾಡುತ್ತಾರೆ” ಎಂದು ಹರಿಹಾಯ್ದರು.
ಬಿಜೆಪಿ ನಾಯಕರಿಂದಲೇ ಧರ್ಮಸ್ಥಳಕ್ಕೆ ಅಪಮಾನ
ಧರ್ಮಸ್ಥಳ ವಿರುದ್ಧ ಬಿಜೆಪಿ ಷಡ್ಯಂತ್ರ: ಬುರುಡೆ ಗಿರಾಕಿ ಯಾರು? ಬಿಜೆಪಿ ಕಾರ್ಯಕರ್ತರಲ್ಲವೇ?: ಡಿಸಿಎ. ಡಿ.ಕೆ. ಶಿವಕುಮಾರ್ pic.twitter.com/bAzSrstHL4
— Harithalekhani (@harithalekhani) September 7, 2025
“ಧರ್ಮಸ್ಥಳ ವಿಚಾರದಲ್ಲಿ ಸತ್ಯಾಂಶ ಒದಗಿಸಿರುವವರು ನಾವು. ಆದರೆ ಅವರು ನಮಗಿಂತ ಮುಂಚಿತವಾಗಿ ಹೈಸ್ಪೀಡ್ ನಲ್ಲಿ ಹೊರಟಿದ್ದಾರೆ. ಬಿಜೆಪಿಯ ಎರಡು ಗುಂಪುಗಳ ನಡುವಣ ತಿಕ್ಕಾಟಕ್ಕೆ ಧರ್ಮಸ್ಥಳವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಲಿಪಶು ಮಾಡುತ್ತಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು. ಬುರುಡೆ ಗಿರಾಕಿ ಯಾರು? ಬಿಜೆಪಿ ಕಾರ್ಯಕರ್ತರಲ್ಲವೇ? ಧರ್ಮಸ್ಥಳಕ್ಕೆ ಅಪಮಾನ ಆಗಿದ್ದರೆ ಅದು ಬಿಜೆಪಿ ನಾಯಕರು ಹಾಗೂ ಅದರ ಸಂಘಟನೆಯವರಿಂದ ಮಾತ್ರ” ಎಂದು ಕಿಡಿಕಾರಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಒಂದೆರಡು ದಿನಗಳಲ್ಲಿ ಬಿಜೆಪಿಯವರು ಮಾಡಿರುವ ಕಾನೂನನ್ನು ನಿಮ್ಮ ಮುಂದೆ ತಂದಿಡುತ್ತೇನೆ. ಅವರು ಮಾಡಿರುವ ಕಾನೂನಿನಲ್ಲಿ ಈ ಚುನಾವಣೆ ವೇಳೆ ಮತಯಂತ್ರ ಅಥವಾ ಮತಪತ್ರ ಬಳಕೆ ಮಾಡಬಹುದು ಎಂದು ಹೇಳಿದ್ದಾರೆ? ಅವರು ಮಾಡಿರುವ ಕಾನೂನು ಪ್ರಕಾರ ನಡೆದರೆ ತಪ್ಪೇನಿದೆ?” ಎಂದು ಪ್ರಶ್ನಿಸಿದರು.