ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದೊಡ್ಡಬಳ್ಳಾಪುರ ತಾಲ್ಲೂಕು ಕಾನೂನು ಸೇವಾ ಸಮಿತಿ, ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘ, ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ತಾಲೂಕಿನ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಮಂಗಳವಾರ ಕಾನೂನು ಅರಿವು-ನೆರವು ಕಾರ್ಯಕ್ರಮ ಹಾಗೂ ಪೌಷ್ಠಿಕಾಂಶ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ಕ್ರಾಂತಿ ಕಿರಣ್ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ 18 ವರ್ಷದ ಕೆಳಗಿನ ವಯಸ್ಸಿನವರು ವಾಹನ ಚಾಲನೆ ಮಾಡುತ್ತಿರುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಆದರೆ, ನ್ಯಾಯಾಲಯದಲ್ಲಿ ಇದರಿಂದ ಉಂಟಾಗುತ್ತಿರುವ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದು ಮಕ್ಕಳ ಹಿತದೃಷ್ಟಿಯಿಂದ ಸ್ವೀಕಾರಾರ್ಹವಲ್ಲ.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಾಲ್ಯ ಎಷ್ಟು ಅತ್ಯಗತ್ಯ ಎಂಬುದು ದೊಡ್ಡವರಾದ ಬಳಿಕ ನಿಮಗೆ ಅರಿವಿಗೆ ಬರುತ್ತದೆ. ವಿದ್ಯಾರ್ಥಿಗಳು ಸಿನಿಮಾಗಳಲ್ಲಿ ಇರುವಂತೆ Part 1 ಹಾಗೂ Part 2 ಎಂಬುದು ನಿಜ ಜೀವನದಲ್ಲಿ ಇರುವುದಿಲ್ಲ ಎಂಬುದನ್ನು ಅರಿತು ಜವಬ್ದಾರಿಯುತವಾಗಿ ವರ್ತಿಸಬೇಕಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ ಹೆಣ್ಣು ಮಕ್ಕಳಿಗೆ ಕಾನೂನುಗಳ ಕುರಿತು ವಿವರಿಸಿದ ನ್ಯಾಯಾಧೀಶರಾದ ಡಿ. ಕ್ರಾಂತಿ ಕಿರಣ್ ಅವರು, ವಿವಾಹ ಪೂರ್ವ, ವಿವಾಹ ನಂತರ ನಡೆಯುವ ಶೋಷಣೆಗಳ ಬಗ್ಗೆ ಹಾಗೂ ಅವುಗಳನ್ನು ತಡೆಯುವ ಕುರಿತು ಹೇಳಿದರು.

ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ರವಿ ಮಾವಿನಕುಂಟೆ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಲ್ಲಿ ಕ್ಷೀಣಿಸುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಮಾಡಬೇಕಾದ ಸುದೀರ್ಘ ತಪಸ್ಸಿನ ಬಗ್ಗೆ ತಿಳಿಸಿ, ಎಂ.ಎಸ್.ವಿ. ಶಾಲೆಯ ಶಿಸ್ತು ಸಂಯಮವನ್ನು ಪ್ರಶಂಸಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಶಾರದ ನಾಗನಾಥ್ ಮಾತನಾಡಿ, ನಾವು ಪ್ರತಿದಿನ ಸೇವಿಸುತ್ತಿರುವ ಆಹಾರ ಪದ್ಧತಿ ಎಷ್ಟು ಸೂಕ್ತವಾಗಿದೆ, ಅದು ನಿಜವಾಗಿಯೂ ಹೇಗಿರಬೇಕೆಂದು ವಿವರಿಸಿದರು. ಅಲ್ಲದೆ ಪ್ರತಿದಿನ ತಪ್ಪದೇ ಕಾಯಿಪಲ್ಲೆಗಳನ್ನು, ಪೌಷ್ಠಿಕಾಂಶ ಇರುವ ಆಹಾರಗಳನ್ನು ಸೇವಿಸಬೇಕು. ಸಾಧ್ಯವಾದಷ್ಟು ಜಂಕ್ – ಫಾಸ್ಟ್ ಫುಡ್ ಪದ್ಧತಿಯ ಆಹಾರ ಸೇವನೆಯನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ವಿನೋದ್ ರಾಜ್ ಮಾತನಾಡಿ, ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ನಿಮ್ಮ ಸುತ್ತ ಮುತ್ತ ಎಲ್ಲಿಯಾದರೂ ಬಾಲ್ಯವಿವಾಹ ನಡೆಯುತ್ತಿದ್ದರೆ ಕೂಡಲೇ ಮಕ್ಕಳ ಸಹಾಯವಾಣಿ 1098 ಕ್ಕೆ ತಿಳಿಸಿ ಬಾಲ್ಯವಿವಾಹವನ್ನು ತಡೆಗಟ್ಟಲು ಸಹಕರಿಸುವ ಮೂಲಕ ನಾವೆಲ್ಲರೂ ಪಣ ತೊಡೋಣ ಎಂದರು.
ಎಂಎಸ್‌ವಿ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಸುಬ್ರಮಣ್ಯ.ಎ ಅವರು “ವಿದ್ಯಾರ್ಥಿಗಳು ಪಾಲಿಸಬೇಕಾದ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಹಾಗೂ ಪೋಷಕರ ಜವಾಬ್ದಾರಿಗಳ ಬಗ್ಗೆ, ವಿದ್ಯಾರ್ಥಿದೆಸೆಯಲ್ಲಿ ಏಕಾಗ್ರತೆ ವೃದ್ಧಿಯಾಗಲು ಪೂರಕವಾದ ಆಹಾರ ಪದ್ಧತಿಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆಮ್ಯ ಬಿ.ವಿ., ಅನೇಕ ನ್ಯಾಯವಾದಿಗಳು ಸೇರಿದಂತೆ ಶಿಕ್ಷಕವೃಂದ, ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.