ದೊಡ್ಡಬಳ್ಳಾಪುರ: ಭಾನುವಾರ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ನಡೆದ ಕಲ್ಲು ತೂರಾಟ ಹಾಗೂ ರಾಜ್ಯಾದ್ಯಂತ ಗಣೇಶ ವಿಸರ್ಜನೆಗೆ ತಡೆ ಒಡ್ಡುತ್ತಿರುವುದು ಹಾಗೂ ಪ್ರಾಂತದ ಅನೇಕ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳ ಪ್ರವೇಶಕ್ಕೆ ನಿಷೇಧ ಒಡ್ಡುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳದ (Vishwa Hindu Parishad Bajrang Dal) ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಬಜರಂಗದಳ ಕೋಲಾರ ವಿಭಾಗ ಸಂಯೋಜಕ ನರೇಶ್ ರೆಡ್ಡಿ, ಬಜರಂಗದಳ ಜಿ ಸಂಯೋಜಕ ಕೃಷ್ಣಮೂರ್ತಿ, ನಮ್ಮ ದೇಶದ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ದೇಶಭಕ್ತರನ್ನು ಸಂಘಟಿಸಲು ಬಾಲಗಂಗಾಧರ್ ತಿಲಕ್ ಅವರು ಗಣೇಶ ಹಬ್ಬವನ್ನು ಸಾರ್ವಜನಿಕ ಗಣೇಶ ಹಬ್ಬವನ್ನಾಗಿ ಪರಿವರ್ತಿಸಿದರು. ಅಂದಿನಿಂದ ಇಂದಿನವರೆಗೂ ಸಹ ಗಣೇಶೋತ್ಸವು ಸಾರ್ವಜನಿಕ ಸ್ಥಳದಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದೆ.
ನಮ್ಮ ರಾಜ್ಯದಲ್ಲಿ ಮದ್ದೂರು, ಸಾಗರ ಸೇರಿದಂತೆ ಅನೇಕ ಸ್ಥಳಗಳಲ್ಲಿ ಗಣೇಶ ಶೋಭಯಾತ್ರೆ ಹಾಗೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಹೊತ್ತಿರುವ ಕಿಡಿಗೇಡಿಗಳಿಂದ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿದೆ. ಇವರ ಮೇಲೆ ರಾಜ್ಯ ಪೊಲೀಸರು ಯಾವುದೇ ಬಲವಾದ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಹಿಂದುಗಳ ಮೇಲೆಯೇ ದಬ್ಬಾಳಿಕೆ ನಡೆಯುತ್ತಿದೆ.
ಗಣೇಶನ ಉತ್ಸವಕ್ಕೆ ರಾಜ್ಯ ಸರ್ಕಾರವು ನಿಯಮಗಳ ಕಾರಣ ನೀಡಿ ಅನೇಕ ರೀತಿಯ ವಿಘ್ನಗಳನ್ನು, ಗಣೇಶನ ಭಕ್ತರ ಮೇಲೆ ಹೇರುತ್ತಿದೆ. ಈ ಉತ್ಸವದಲ್ಲಿ ಭಾಗವಹಿಸಲು ವಿಶ್ವ ಹಿಂದೂ ಪರಿಷತ್ತಿನ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರಿಗೆ ಚಿತ್ರದುರ್ಗ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
ಹಲವು ಕಡೆ ಧ್ವನಿ ವರ್ಧಕಗಳನ್ನು ಬಳಸಲು ನಿಷೇಧ ಹೇರಿದೆ. ಈ ದಿಸೆಯಲ್ಲಿ ನಮ್ಮ ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಅನೇಕ ಮುಖಂಡರ ಮೇಲೆ ವಿಧಿಸಿರುವ ಜಿಲ್ಲಾ ಪ್ರವೇಶ ನಿಬಂಧ ಆದೇಶವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಹಾಗೂ ಗಣೇಶ ಉತ್ಸವ ಹಾಗೂ ಶೋಭಾ ಯಾತ್ರೆ ಮೆರವಣಿಗೆಗಳು ಸಂಭ್ರಮದಿಂದ ನಡೆಯಲು ಅನುಕೂಲ ಮಾಡಿಕೊಡಬೇಕು.
ಗಣೇಶೋತ್ಸವ ಶೋಭಾಯಾತ್ರೆಯ ಮೇಲೆ ಕಲು ತೂರಾಟ ಮಾಡುವವರ ಮೇಲೆ ಸಂಘಟಿತ ಅಪರಾಧ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಲ್ಲು ತೂರುವ ಸ್ಥಳಗಳ ಮೇಲೆ ಡ್ರೋನ್ ಕ್ಯಾಮೆರಾ ಅಳವಡಿಸಬೇಕೆಂದು, ರಾಜ್ಯ ಸರ್ಕಾರವನ್ನು ಆಗ್ರಹಿಸಿ, ಪ್ರತಿಭಟನಾ ಸಭೆ ನಡೆಸಿ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆಗ್ರಹ ಪತ್ರ ನೀಡಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷದ್ ಸೇರಿದಂತೆ ಹಿಂದೂ ಪರ ಸಂಘಟನೆಯ ಪದಾಕಾರಿಗಳು ಭಾಗವಹಿಸಿದ್ದರು.