ಬೆಂಗಳೂರು ಗ್ರಾಮಾಂತರ ಜಿಲ್ಲೆ; ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್.ಡಿ.ಆರ್.ಎಫ್ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಮುಸಾಶಿ ಆಟೋ ಪಾರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ಆಫ್ ಸೈಟ್ ರಾಸಾಯಿನಿಕ ಸೋರಿಕೆ ಅಣುಕು ಪ್ರದರ್ಶನ (Chemical spill mock-up demonstration) ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯದಾ ಆಯಿಷಾ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಣುಕು ಪ್ರದರ್ಶನದ ಪೂರ್ವಭಾವಿಗೆ ಅಧಿಕಾರಿಗಳಿಗೆ ತರಬೇತಿ ಮತ್ತು ಟೇಬಲ್ ಟಾಪ್ ಎಕ್ಸರ್ಸೈಜ್ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಅವರು
ಆಕಸ್ಮಿಕವಾಗಿ ಸಂಭವಿಸಬಹುದಾದ ನೈಸರ್ಗಿಕ ವಿಕೋಪಗಳು, ಕೈಗಾರಿಕಾ ಪ್ರದೇಶ ವ್ಯಾಪ್ತಿಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು, ವಿಕೋಪಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಅಣುಕು ಪ್ರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಅಣುಕು ಪ್ರದರ್ಶನ ಆಗುವಂತಹ ಸಂದರ್ಭದಲ್ಲಿ ಅವಶ್ಯಕತೆ ಇರುವ ತುರ್ತು ಆಂಬುಲೆನ್ಸ್ ಹಾಗೂ ಆರೋಗ್ಯ ಸೇವೆ, ಅಗ್ನಿ ಶಾಮಕದಳ, ಟ್ರಾಫಿಕ್ (ವಾಹನ ದಟ್ಟಣೆ)ನಿಯಂತ್ರಣ, ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ, ಬಂದೋಬಸ್ತ್ ವ್ಯವಸ್ಥೆ, ಪುನರ್ವಸತಿ ಕೇಂದ್ರ ಕುರಿತು ಆಯಾ ಇಲಾಖೆಗಳ ಜವಾಬ್ದಾರಿಗಳನ್ನು ಅಧಿಕಾರಿಗಳಿಗೆ ತಿಳಿಸಲಾಯಿತು.
ಅಣುಕು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ವಹಿಸಿರುವ ಕರ್ತವ್ಯವನ್ನು ನಿರ್ವಹಿಸಿ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಕಾರ್ಖಾನೆಗಳು ಹಾಗೂ ಬಾಯ್ಲರ್ ಗಳ ಉಪನಿರ್ದೇಶಕರಾದ ಸೋಮಶೇಖರ್, ಹೊಸಕೋಟೆ ಕಾರ್ಖಾನೆಗಳ ಉಪನಿರ್ದೇಶಕರಾದ ನರಸಿಂಹ ಮೂರ್ತಿ, ವಿಪತ್ತು ನಿರ್ವಹಣಾ ಪರಿಣಿತರಾದ ಸ್ಮಿತಾ, ಎನ್.ಡಿ.ಆರ್.ಎಫ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮುಸಾಶಿ ಕಾರ್ಖಾನೆಯ ಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)