ಬೆಂಗಳೂರು: ಕೋಮು ಪ್ರಚೋದನೆ, ಸಿಎಂ ಸಿದ್ದರಾಮಯ್ಯ (Cmsiddaramaiah) ಅವರ ಬಗ್ಗೆ ಅವಹೇಳನ ಆರೋಪದಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ (Mahesh Vikram Hegde) ಅವರನ್ನು ಮೂಡುಬಿದಿರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊ ಎಡಿಟ್ ಮಾಡಿ ಮುಖ್ಯಮಂತ್ರಿಗಳೇ, “ಗಣಪನ ಮೆರವಣಿಗೆಯ ಮೇಲೆ ಕಲ್ಲು ತೂರಿದವರ ಮಸೀದಿ ಮೇಲೆ ಬುಲ್ಲೋಜರ್ ನುಗ್ಗಿಸಿ ” ಎಂಬ ಶೀರ್ಷಿಕೆ ಇದ್ದ ಪೋಸ್ಟರ್ ಅನ್ನು ಮಹೇಶ್ ವಿಕ್ರಮ್ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಎರಡು ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸಿ ಕೋಮುಗಲಭೆ ಸೃಷ್ಟಿಸುವ ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಉದ್ದೇಶದಿಂದ ಈ ಪೋಸ್ಟ್ ನ್ನು ಹಾಕಿರುವ ಬಗ್ಗೆ ಮೂಡುಬಿದಿರೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ ಪೊಲೀಸರು ಆರೋಪಿ ಮಹೇಶ್ ವಿಕ್ರಂ ಹೆಗ್ಡೆಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಯತ್ನಾಳ್ ಆಕ್ರೋಶ
ಪೋಸ್ಟ್ ಕಾರ್ಡ್ ಸುದ್ದಿ ವಾಹಿನಿಯ ಸಂಸ್ಥಾಪಕರು ಹಾಗೂ ಕರಾವಳಿಯ ಹಿಂದುತ್ವದ ಧ್ವನಿ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ. ಪ್ರಖರ ಹಿಂದುತ್ವವಾದಿಗಳನ್ನು ಹೆಡೆಮುರಿಕಟ್ಟಲು ಸರ್ಕಾರ ಯಾವುದೇ ಕಾರಣಗಳಿಲ್ಲದೆ ಬಂಧಿಸುತ್ತಿರುವುದು ಪ್ರಜಾಪ್ರಭುತ್ವದ ಅಣಕ ಎಂದರೆ ತಪ್ಪಾಗಲಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಹಳೆ ಮೈಸೂರಿನಲ್ಲಿ ಈಗಾಗಲೇ ಹಿಂದೂಗಳು ಸಿಡಿದೆದ್ದಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಹಿಂದುತ್ವಕ್ಕೆ ಪಕ್ಷಾತೀತವಾದ ಬೆಂಬಲ ಸಿಗುತ್ತಿರುವುದು ಸರ್ಕಾರಕ್ಕೆ ಅದರಲ್ಲೂ ಮುಖ್ಯ ಮಂತ್ರಿಗಳಿಗೆ ಅಪಥ್ಯವಾಗಿದೆ.
ಹಿಂದುತ್ವದ ಅಲೆಯನ್ನು ಕಟ್ಟಿಹಾಕಲು ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಿರುವುದು ಖಂಡನೀಯ ಹಾಗೂ ಕಾನೂನುಬಾಹಿರ ಕ್ರಮವಾಗಿದೆ.
ಸಕಾರಣವಿಲ್ಲದೆ ಬಂಧಿಸಿರುವ ಅವರನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಜನಾಕ್ರೋಶದ ಜ್ವಾಲೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗುವುದು ನಿಶ್ಚಿತ ಎಂದಿದ್ದಾರೆ.