ದೊಡ್ಡಬಳ್ಳಾಪುರ: ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುತ್ತಿದ್ದ ವೇಳೆ ರೈತನ ಮೇಲೆ ಕರಡಿ ದಾಳಿ (Bear attack) ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಕಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕರಡಿ ದಾಳಿಯಿಂದ 33 ವರ್ಷದ ರಮೇಶ್ ಎನ್ನುವವರ ತೊಡೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಭಾನುವಾರ ಸಂಜೆ ಮಾಕಳಿ ಗ್ರಾಮದ ಹೊರವಲಯದಲ್ಲಿರುವ ಸ್ವಂತ ಜಮೀನಿನಲ್ಲಿ ಬೆಳೆಯಲಾಗುತ್ತಿರುವ ಜೋಳದ ಬೆಳೆಗೆ ರಮೇಶ್ ನೀರು ಕಟ್ಟುವ ವೇಳೆ ಎರಡು ಮರಿಗಳನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ಕರಡಿ ಬಂದಿದೆ. ಕಾಡು ಹಂದಿ ಇರಬಹುದು ಎಂದು ನೋಡಲು ಹೋದಾಗ ದಾಳಿಗೆ ಮುಂದಾದ ವೇಳೆ ಕರಡಿ ಬೆನ್ನತ್ತಿ ಬಂದಿದೆ.
ಈ ವೇಳೆ ರಮೇಶ್ ಅವರು ಸಮೀಪದಲ್ಲಿಯೇ ಇದ್ದ ಮರವನ್ನು ಏರಿದ್ದಾರೆ. ವಿಪರ್ಯಾಸ ಮರವನ್ನು ಹತ್ತಿದ್ದ ಕರಡಿ ರಮೇಶ್ ಅವರ ತೊಡೆಗೆ ಬಲವಾಗಿ ದಾಳಿ ನಡೆಸಿದೆ. ಕೂಗಾಟ ಕೇಳಿಸಿದ ಅಕ್ಕಪಕ್ಕದ ಹೊಲದಲ್ಲಿದ್ದ ರೈತರು ಸ್ಥಳಕ್ಕೆ ದೌಡಾಯಿಸಿ ಕರಡಿ ದಾಳಿಯಿಂದ ರಮೇಶ್ ಅವರನ್ನು ರಕ್ಷಿಸಿದ್ದಾರೆ.
ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದಾರೆ.
ಮಾಕಳಿ ಬೆಟ್ಟದಲ್ಲಿ 4-5 ಕರಿಗಳು ಇವೆ ಎನ್ನಲಾಗಿದ್ದು, ಇತ್ತೀಚಿಗೆ ಜಮೀನುಗಳ ಬಳಿ ಬಂದು ರೈತರ ಮೇಲೆ ದಾಳಿ ನಡೆಸುತ್ತಿರುವುದು ರೈತರ ಆತಂಕ್ಕೆ ಕಾರಣವಾಗಿದೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಹೆಚ್ಚೆತ್ತು, ಕರಡಿಗಳನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಮುಖಂಡ ಜಯರಾಮ್ ಒತ್ತಾಯಿಸಿದ್ದಾರೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						