ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬುಧವಾರ 75 ವರ್ಷ ತುಂಬಲಿದ್ದು, ಇದರ ಅಂಗವಾಗಿ ಬಿಜೆಪಿಯು ದೇಶಾದ್ಯಂತ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ.
ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ ಗಳಿಂದ ಹಿಡಿದು, ಸರ್ಕಾರಿ ಯೋಜನೆ ಜಾರಿ ತನಕ ವಿವಿಧ ರಾಜ್ಯಗಳು ನಾನಾ ಕಾರ್ಯ ಕ್ರಮ ಹಮ್ಮಿಕೊಂಡಿವೆ. ಸೆ.17ರಿಂದ ಅ.2 (ಮಹಾತ್ಮಾ ಗಾಂಧಿ/ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ) ವರೆಗೆ ದೇಶಾದ್ಯಂತ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಅಭಿಯಾನ, ಒಡಿಶಾದಲ್ಲಿ ಗಿಡ ನೆಡುವ ಅಭಿಯಾನವನ್ನು ಸಹ ಅಲ್ಲಿನ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ.
ಗುಜರಾತ್ ಸರ್ಕಾರ ಯೋಗ ಅಭಿಯಾನ, ದೆಹಲಿಯಲ್ಲಿ ಸಿಎಂ ರೇಖಾ ಗುಪ್ತಾ ಸರ್ಕಾರ ವಿವಿಧ ಆರೋಗ್ಯ ಯೋಜನೆ ಗಳನ್ನು ಜನರಿಗೆ ಮುಕ್ತ ಮಾಡಲಿದ್ದಾರೆ. ಬಂಗಾಳದಲ್ಲಿ ವಾರ ಪೂರ್ತಿ ಮೋದಿ ಅವರ ಜೀವನದ ಕುರಿತು ಪ್ರದರ್ಶನ ಆಯೋಜಿಸಲಾಗಿದೆ.
ಟ್ರಂಪ್ ಶುಭ ಹಾರೈಕೆ
ಪ್ರಧಾನಿ ಮೋದಿ ಜನ್ಮದಿನ ಹಿನ್ನೆಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಕರೆ ಮಾಡಿ ಶುಭ ಕೋರಿದ್ದಾರೆ. ಇದಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮೋದಿ ಧನ್ಯವಾದ ಸಲ್ಲಿಸಿದ್ದು, ‘ಭಾರತ- ಅಮೆರಿಕದ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿಮ್ಮಂತೆ ನಾನೂ ಬದ್ಧನಾಗಿದ್ದೇನೆ’ ಎಂದಿದ್ದಾರೆ.