ಬೆಂ.ಗ್ರಾ.ಜಿಲ್ಲೆ: ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಕಾಣಬಹುದು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ (Syeda Ayesha) ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನಲ್ಲಿರುವ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು ನಂತರ ಮಾತನಾಡಿ
ಸಮಾಜದಲ್ಲಿ ಶ್ರೇಷ್ಠ ಸೃಷ್ಟಿಯ ಶಿಲ್ಪಿಗಳಾಗಿ ವಿಶ್ವಕರ್ಮರು ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ದೈನಂದಿನ ಜೀವನದಲ್ಲಿ ನಾವು ಬಳಸುವ ವಿಗ್ರಹಗಳು, ಯಂತ್ರಗಳು ಹಾಗೂ ಪೀಠೋಪರಣಗಳು ಇತ್ಯಾದಿ ಅಗತ್ಯ ವಸ್ತುಗಳನ್ನು ವಿಶ್ವಕರ್ಮ ಸ್ವಾಮಿಗಳಿಂದ ನಮಗೆ ದೊರಕಿದೆ. ಅವರ ವಿಗ್ರಹ ಕೆತ್ತನೆಯ ಮೇಲಿದ್ದ ತಾಳ್ಮೆ, ಸಹನೆ ಅತ್ಯದ್ಭುತವಾದದ್ದು.
ಕೈಗಾರಿಕಾ, ತಾಂತ್ರಿಕ, ಶಿಲ್ಪ ಕೌಶಲ್ಯ ರಂಗದಲ್ಲಿ ಮತ್ತಷ್ಟು ಸಾಧನೆ ಮಾಡಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಈ ಶುಭದಿನದಂದು ಪ್ರತಿಜ್ಞೆ ಮಾಡೋಣ. ನಮ್ಮ ಜೀವನವು ಶ್ರಮ ಮತ್ತು ಶ್ರೇಷ್ಠತೆಯ ಹಾದಿಯಲ್ಲಿ ಸಾಗಲಿ, ವಿಶ್ವಕರ್ಮ ಸ್ವಾಮೀಜಿಯ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ ಎಂದು ಹೇಳಿದರು.
ಬೆಸ್ಕಾಂ ನಿವೃತ್ತ ಅಭಿಯಂತರರಾದ ಶಂಕರ್ ನಾರಾಯಣ್ ಆಚಾರ್ ಅವರು ಉಪನ್ಯಾಸ ನೀಡಿ ಸೃಷ್ಟಿಯ ಶಿಲ್ಪಿ ವಿಶ್ವಕರ್ಮರು ಇಂದ್ರ ಪ್ರಸ್ತ, ದ್ವಾರಕಾ ಮುಂತಾದ ದೇವರ ಆಸ್ಥಾನಗಳು ಇವರ ಶಿಲ್ಪಕಲೆಯಲ್ಲಿ ಅರಳಿದೆ. ಜೊತೆಗೆ ವಿಷ್ಣು ಚಕ್ರ, ಈಶ್ವರನಿಗೆ ತ್ರಿಶೂಲ ಮಾಡಿದ್ದು ಇವರೇ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ದೇವಾನು ದೇವತೆಗಳ ಸಂಸ್ಥಾನಗಳಲ್ಲಿ ಶಿಲ್ಪಕಲೆ ಕೆತ್ತಿರುವ ಅವರ ಕೊಡುಗೆ ಇಂದಿಗೂ ಪ್ರಸ್ತುತ ಎಂದರು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ತಹಶೀಲ್ದಾರ್ ಅನಿಲ್, ವಿಶ್ವ ಕರ್ಮ ಸಮಾಜದ ಮುಖಂಡರಾದ ಜಿ ನಾರಾಯಣಾಚಾರ್, ಸತ್ಯನಾರಾಯಣಾಚಾರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.