ದೊಡ್ಡಬಳ್ಳಾಪುರ: ಖ್ಯಾತ ನಟ ಸಾಹಸಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ (Dr. Vishnuvardhan) ಅವರ 75ನೇ ಜನ್ಮ ದಿನಾಚರಣೆ ತಾಲೂಕಿನ ವಿವಿದೆಡೆಗಳಲ್ಲಿ ಆಚರಿಸಲಾಯಿತು.
ನಗರದ ಸಿದ್ಧಲಿಂಗಯ್ಯ ವೃತ್ತದ ಬಳಿಯ ಬೆಸ್ಕಾಂನ ಹಳೆಯ ಕಚೇರಿ ಮುಂಭಾಗ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಗೆ ತಾಲೂಕು ಡಾ.ವಿಷ್ಣು ಸೇನಾ ಸಮಿತಿ ಹಾಗೂ ಡಾ.ವಿಷ್ಣುವರ್ಧನ್ ಅಭಿಮಾನಿಗಳು ಮಾಲಾರ್ಪಣೆ ಮಾಡಿದರು. ನಂತರ ಕೇಕ್ ಕತ್ತರಿಸಿ, ಸಿಹಿ ವಿತರಿಸಲಾಯಿತು.
ಡಾ.ವಿಷ್ಣುವರ್ಧನ್ ಅವರ 75 ನೇ ಜನ್ಮ ದಿನಾಚರಣೆ ವಿಶೇಷವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಳೇ ಬಸ್ ನಿಲ್ದಾಣದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ನಡೆಯಿತು. ನಂತರ ಶಾಲಾ ಶಿಕ್ಷಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳ ವಿತರಣೆ, ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಶ್ರೀ ರಾಮ ಮೆಲೋಡಿಸ್ ತಂಡದಿಂದ ಡಾ.ವಿಷ್ಣುವರ್ಧನ್ ಚಿತ್ರ ಗೀತೆಗಳ ವಾದ್ಯಗೋಷ್ಟಿ ನಡೆಯಿತು.
ವೇದಿಕೆಯ ಕಾರ್‍ಯಕ್ರಮದಲ್ಲಿ ಮಾತನಾಡಿದ ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಸಾಹಸಸಿಂಹ ಡಾ.ವಿಷ್ಣುವರ್ದನ್ ಅವರು ಚಿತ್ರರಂಗಕ್ಕೆ ನೀಡಿರುವ ಸೇವೆ ಅನುಪಮವಾಗಿದೆ. ಆದರೆ ಅವರಿಗೆ ಒಂದು ಸ್ಮಾರಕ ರೂಪುಗೊಳ್ಳದಿರುವುದು ದುರದೃಷ್ಟಕರ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ.ವಿಷ್ಣುವರ್ಧನ್ ಸಮಾ ನೆಲಸಮ ಮಾಡಿರುವುದು ಖಂಡನೀಯವಾಗಿದ್ದು, ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಮೀನಮೇಷ ಎಣಿಸುವುದನ್ನು ಬಿಟ್ಟು, ಸ್ಮಾರಕವನ್ನು ಉಳಿಸುವಲ್ಲಿ ಕ್ರಮ ವಹಿಸಬೇಕು ಎಂದರು.
ಡಾ.ವಿಷ್ಣುವರ್ಧನ್ ಸೇನಾ ಸಮಿತಿ ತಾಲೂಕು ಅಧ್ಯಕ್ಷ ಗಂಗರಾಜ, ಕಾರ್ಯದರ್ಶಿ ಶಿವಕುಮಾರ್, ಸಂಚಾಲಕ ರಾಮಾಂಜಿನಪ್ಪ ಕರ್ನಾಟಕ ಚಲನಚಿತ್ರ ಲೋಕದಲ್ಲಿ ಜನಮನಗಳನ್ನು ಗೆದ್ದ ಹೆಸರಾಂತ ಕನ್ನಡದ ಶ್ರೇಷ್ಠ ನಟ, ಸಂಸ್ಕೃತಿ ಪ್ರೇಮಿ ಸಾಹಸಸಿಂಹ ಡಾ.ವಿಷ್ಣುವರ್ದನ್ ಅವರ ಸೇವೆ ಮತ್ತು ಕೊಡುಗೆಗಳನ್ನು ಕನ್ನಡ ನಾಡು ಮರೆಯಲು ಸಾಧ್ಯವಿಲ್ಲ.
ವಿಷ್ಣುವರ್ಧನ್ ಅವರು ಕೇವಲ ನಟನಾಗಿರದೆ ಅವರ ಮೇರು ವ್ಯಕ್ತಿತ್ವ, ಸಾಮಾಜಿಕ ಅಂತಃಕರಣದ ಜೀವಂತಿಕೆಯಿಂದಲೆ ಇಂದಿಗೂ ಜನಮಾನಸದಲ್ಲಿ ಜೀವಂತರಾಗಿದ್ದಾರೆ. ನೈಜ ಅಭಿನಯದಿಂದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರ ಅಭಿನಯಕ್ಕೆ ಬೆರಗಾಗದವರಿಲ್ಲ. ಸಾಮಾಜಿಕ, ಐತಿಹಾಸಿಕ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ವಿಷ್ಣುವರ್ಧನ್ ಅವರ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಅಂತ ನಟರನ್ನು ಪಡೆದ ಕನ್ನಡ ಚಿತ್ರರಂಗ ಧನ್ಯ ಎಂದು ಸ್ಮರಿಸಿದರು.
ಈ ವೇಳೆ ತಾಲೂಕು ಡಾ.ವಿಷ್ಣು ಸೇನಾ ಸಮಿತಿಯ ಕುಮಾರ ಬಂಗಾರಿ, ರವಿಕುಮಾರ್, ವಾರೇಶ್, ಮುನಿರಾಜು, ನಾರಾಯಣಪ್ಪ ವಿಶ್ವನಾಥ್, ಗಣೇಶ್, ರಾಮಾಂಜಿನಪ್ಪ ,ಸುರೇಶ್, ಗಂಗಾಧರ್ ಮೊದಲಾಗಿ ವಿಷ್ಣುವರ್ಧನ್ ಅಭಿಮಾನಿಗಳು ಭಾಗವಹಿಸಿದ್ದರು.