ದೊಡ್ಡಬಳ್ಳಾಪುರ: ರೇಷ್ಮೆ ಮತ್ತು ಕೃತಕ ರೇಷ್ಮೆಗೆ ಬಣ್ಣ ಹಚ್ಚುವ ಘಟಕ ಮತ್ತು ಮಾಲೀಕರ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಬಣ್ಣ ಘಟಕದ ಮಾಲೀಕರು, ನೂರಾರು ನೇಕಾರರು ನಗರದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಕಚೇರಿ ಮುಂದೆ ಪ್ರತಿಭಟನೆ (Protest) ನಡೆಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳು ನಾಲ್ಕು ವರ್ಷಗಳಿಂದ ಬಣ್ಣದ ಘಟಕಗಳ ಮೇಲೆ ಮತ್ತು ಮಾಲೀಕರಿಗೆ ಪದೇ ಪದೇ ನೋಟಿಸ್ ನೀಡಿ ಘಟಕಗಳನ್ನು ಮುಚ್ಚುವಂತೆ ಕಿರುಕುಳ ನೀಡಿದ್ದಾರೆ. ಮಾಲೀಕರಿಗೆ ಅನವಶ್ಯಕ ಭಯ ಹುಟ್ಟಿಸಿ ಬಣ್ಣ ಮಾಡುವ ಉಪಕರಣ ಮತ್ತು ಒಲೆಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಿಸಿದ್ದಾರೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ. ಹೇಮಂತರಾಜು ದೂರಿದರು.
ಬಣ್ಣದ ಘಟಕದ ಮಾಲೀಕರು ನಿಯಮ ಪಾಲಿಸಿದರೂ ಸಹ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳು ಕೆಲವರ ಮಾತು ಕೇಳಿಕೊಂಡು ಘಟಕದ ಮಾಲೀಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 20 ಸಾವಿರ ಮಗ್ಗಗಳು ನಡೆಯುತ್ತಿವೆ. ಇಲ್ಲಿನ ಮಗ್ಗಗಳಿಗೆ ಬಣ್ಣ ಮಾಡುವ ಘಟಕಗಳು ಆಸರೆಯಾಗಿವೆ. ಈ ಘಟಕಗಳನ್ನು ಮುಚ್ಚಿದರೆ ದೊಡ್ಡಬಳ್ಳಾಪುರದ ಆರ್ಥಿಕ ಜೀವನಾಡಿಯಾಗಿರುವ ನೇಯ್ದೆ ಉದ್ಯಮಕ್ಕೆ ಪೆಟ್ಟು ಬೀಳಲಿದೆ. ಸ್ಥಗಿತವಾಗಲಿದೆ. ಸುಮಾರು 30ಸಾವಿರ ಜನರ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
‘ಪರಿಸರದ ಬಗ್ಗೆ ನಮಗೂ ಕಾಳಜಿ ಇದೆ. ಬಣ್ಣ ಹಚ್ಚುವ ಘಟಕವನ್ನು ಒಂದು ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಹಾಗೆ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿಕೊಟ್ಟು ಮತ್ತು ಬಣ್ಣದ ನೀರು ಸಂಸ್ಕರಿಸುವ ಘಟಕ ನಿರ್ಮಿಸಿಕೊಟ್ಟರೆ ನಗರದಲ್ಲಿರುವ ಘಟಕಗಳನ್ನು ಸ್ಥಳಾಂತರಗೊಳ್ಳಲಾಗುವುದು.
ಒತ್ತಡಗಳಿಗೆ ಮಣಿದು ಬಣ್ಣದ ಘಟಕಗಳಿಗೆ ಕಿರುಕುಳ ನೀಡುವುದು, ದಬ್ಬಾಳಿಕೆ ನಡೆಸುವುದು ನಿಲ್ಲುವವರಿಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ನೇಕಾರರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೆ.ಜಿ.ಗೋಪಾಲ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ಎಸ್.ಎನ್.ಶಿವರಾಂ, ಸೂರ್ಯ ಪ್ರಕಾಶ್, ಸಂಜೀವಪ್ಪ, ಜೆ.ಎಸ್.ಮಂಜುನಾಥ್, ಖಜಾಂಚಿ ರಂಗಸ್ವಾಮಿ, ಕಾರ್ಯದರ್ಶಿ ರಮೇಶ್ ರೆಡ್ಡಿ, ರಂಗನಾಥ, ಮುಖಂಡರಾದ ರವಿಕುಮಾರ್, ದೊಡ್ಡಬಳ್ಳಾಪುರ ನೇಕಾರರ ವೇದಿಕೆ ಅಧ್ಯಕ್ಷ ಎಸ್.ವೇಣುಗೋಪಾಲ್ ಇದ್ದರು.
ತೊಂದರೆ ಕೊಡುವ ಉದ್ದೇಶ ಇಲ್ಲ
ನೇಕಾರರ ಮನವಿಗೆ ಪ್ರತಿಕ್ರಿಯಿಸಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಪರಿಸರ ಅಧಿಕಾರಿ ಶಿವಕುಮಾರ್, ನೇಕಾರರಿಗೆ ತೊಂದರೆ ಕೊಡುವ ಉದ್ದೇಶ ನಮ್ಮಿಂದವಾಗಿಲ್ಲ. ಬಣ್ಣ ಘಟಕಗಳ ಮೇಲೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದರಿಂದ ನೋಟಿಸ್ ನೀಡಬೇಕಾಯಿತು. ಆದರೆ ಘಟಕವನ್ನು ನೆಲಸಮ ಮಾಡಿದ್ದುದರ ಬಗ್ಗೆ ಜಾಗದ ಮಾಲೀಕರಿಂದ ಸ್ಪಷ್ಟನೆ ಕೇಳಲಾಗಿದೆ ಎಂದು ತಿಳಿಸಿದರು.
‘ಬಣ್ಣ ಘಟಕಗಳು ಗುಡಿ ಕೈಗಾರಿಕೆಗಳಾಗಿದ್ದು, ಇದರಲ್ಲಿ ಹೆಚ್ಚಿನ ಲಾಭಇಲ್ಲವೆಂಬುದು ನಮ್ಮ ಅರಿವಿಗೂ ಇದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕಾದ ಅಗತ್ಯ ಇದೆ. ಜವಳಿ ಸಚಿವರ ಗಮನಕ್ಕೆ ತಂದು, ಘಟಕಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗುವುದು. ಅಲ್ಲಿಯವರೆಗೆ ಘಟಕಗಳ ತ್ಯಾಜ್ಯ ನೀರನ್ನು ಡ್ರಮ್‌ಗಳಲ್ಲಿ ಸಂಗ್ರಹಿಸಿ, ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವ’ ಭರವಸೆ ನೀಡಿದರು.