ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಕೊಟ್ಟಿಗೇಮಾಚೇನಹಳ್ಳಿ ಗ್ರಾಮಸ್ಥರಿಗೆ ವನ್ಯಜೀವಿಗಳ ಹಾವಳಿ ಮಿತಿಮೀರಿದೆ, ಇತ್ತೀಚೆಗಷ್ಟೇ ಕರಡಿ ಆತಂಕದ ಬೆನ್ನಲ್ಲೇ, ಈಗ ಊರಿಗೆ ನುಗ್ಗಿರುವ ಚಿರತೆ (Leopard) ಮೂರು ಕುರಿಗಳು ಬಲಿಪಡೆದು, ಹಲವು ಕುರಿಗಳನ್ನು ಗಾಯಗೊಳಿಸಿದೆ.
ಗುರುವಾರ ರಾತ್ರಿ ಕೊಟ್ಟಿಗೇಮಾಚೇನಹಳ್ಳಿ ಗ್ರಾಮ ಲಕ್ಷ್ಮಿನಾರಾಯಣಪ್ಪ ಎನ್ನುವರು ಮನೆಯ ಬಳಿ ಕೊಟ್ಟಿಗಿಗೆ ನುಗ್ಗಿರುವ ಚಿರತೆ 8 ಕುರಿಗಳ ಮೇಲೆ ದಾಳಿ ನಡೆಸಿದೆ. ಪರಿಣಾಮ 3 ಕುರಿಗಳು ಸಾವನಪ್ಪಿದ್ದು, 5 ಕುರಿಗಳು ಗಾಯಗೊಂಡಿವೆ.
ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಮುಖಂಡ ಆನಂದ್, ಪದೇಪದೆ ಚಿರತೆ ದಾಳಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಆತಂಕದಿಂದ ಬದುಕುತ್ತಿದ್ದಾರೆ. ಲಕ್ಷ್ಮಿನಾರಾಯಣಪ್ಪ ಅವರು 50 ಸಾವಿರ ರೂಗಳಿಗೆ ತಮ್ಮ ಕುರಿಗಳನ್ನು ಮಾರಿದ್ದರು. ಆದರೆ ಈ ನಡುವೆ ಚಿರತೆ ದಾಳಿ ಮಾಡಿದೆ.
ಚಿರತೆ ದಾಳಿ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಅಧಿಕಾರಿಗಳು ಕ್ರಮಕೈಗೊಂಡು ಚಿರತೆ ಸೆರೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.