ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ (Ayyappa temple) ಚಿನ್ನಾಭರಣ ಕಳ್ಳತನವಾಗಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.
ಇಲ್ಲಿನ ದ್ವಾರಪಾಲಕ ವಿಗ್ರಹಕ್ಕೆ ಹಾಕಿದ್ದ 42.8 ಕೆಜಿ ತೂಕದ ಕವಚದಲ್ಲಿ 4.5 ಕೆಜಿ ಚಿನ್ನ ಕಾಣೆಯಾಗಿದೆ. ದೇವಸ್ಥಾನದ ಗರ್ಭಗುಡಿಯ ಚಿನ್ನದ ಲೇಪನ ಕಾಮಗಾರಿಯ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿದೆ ಎನ್ನಲಾಗಿದೆ.
ಸದ್ಯ ಈ ಪ್ರಕರಣಕ್ಕೆ ಕೇರಳ ಹೈಕೋರ್ಟ್ ಎಂಟ್ರಿಯಾಗಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮದ್ಯದ ದೊರೆ ವಿಜಯ್ ಮಲ್ಯ ಜನವರಿ 2011ರಲ್ಲಿ 32 ಕೆಜಿ ಚಿನ್ನ ಮತ್ತು 1900 ಕೆಜಿ ತಾಮ್ರ ಬಳಸಿ, ದೇಗುಲದ ಮುಂಭಾಗದ ಚಿನ್ನದ ಹಾಳೆಗಳ ಮೇಲ್ಬಾವಣಿ ನಿರ್ಮಿಸಿಕೊಟ್ಟಿದ್ದರು. ಅದಕ್ಕೆ ಆಗ ತಗುಲಿದ ವೆಚ್ಚ 18 ಕೋಟಿ ರುಪಾಯಿ ವೆಚ್ಚವಾಗಿತ್ತು.
ಆದರೆ ವರ್ಷ ಕಳೆದಂತೆ ದೇವಸ್ಥಾನದ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ ಸೋರಲು ಶುರುವಾಗಿತ್ತು. ಪ್ರವೇಶ ದ್ವಾರದ ಎಡಭಾಗದಲ್ಲಿರುವ ಗರ್ಭಗುಡಿಯ ಹೊರ ಗೋಡೆಯ ಮೂಲಕ ನೀರು ಹೊರಬರುತ್ತಿತ್ತು.
ಈ ವೇಳೆ ಇದನ್ನು ಸರಿಪಡಿಸಲು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ನಿರ್ಧರಿಸಿ, ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿತ್ತು. ಈ ಹಿನ್ನಲೆಯಲ್ಲಿ ದುರಸ್ತಿ ಕಾರ್ಯಕ್ಕಾಗಿ, ದೇವಸ್ಥಾನದ ಖಜಾನೆಯಲ್ಲಿದ್ದ ಸುಮಾರು 42 ಕೆಜಿ ತೂಕದ ಚಿನ್ನದ ತಟ್ಟೆಗಳನ್ನು ಹೊರತೆಗೆದು, ಅದನ್ನು ಶುದ್ದೀಕರಿಸಿ, ಹೊಸದಾಗಿ ಹಾಳೆಗಳನ್ನು ಮಾಡಿ ಗರ್ಭಗುಡಿ ಯ ಶಿಖರಕ್ಕೆ ಅಳವಡಿಸಬೇಕಾಗಿತ್ತು. ಆದರೆ ಮರು ನವೀಕರಣ ಕೆಲಸ ಕಾರ್ಯಗಳು ಮುಗಿದು ಚಿನ್ನದ ಹಾಳೆಗಳನ್ನು ಹಿಂದಿರುಗಿಸುವಾಗ ಸುಮಾರು 4.5 ಕೆಜಿ ಚಿನ್ನ ಕಡಿಮೆ ಇರುವುದು ತಿಳಿದು ಬಂದಿದ್ದು, ಶಂಕೆ ಮೂಡಿಸಿದೆ.