ಬೆಂ.ಗ್ರಾ.ಜಿಲ್ಲೆ: ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ನೈಜ ಪ್ರಕರಣಗಳು ಹಾಗೂ ಸುಳ್ಳು ಪ್ರಕರಣಗಳು ಎರಡು ಇರುತ್ತವೆ. ಸುಳ್ಳು ಪ್ರಕರಣಗಳಿಂದ ನೈಜ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದ್ದು ಸಾರ್ವಜನಿಕರು ಸುಳ್ಳು ಕೇಸ್ ದಾಖಲಿಸಬೇಡಿ ಎಂದು ಉಪಲೋಕಾಯುಕ್ತ ನ್ಯಾ. ಬಿ ವೀರಪ್ಪ (Justice B Veerappa) ಹೇಳಿದರು.
ನೆಲಮಂಗಲ ತಾಲ್ಲೂಕಿನ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನೆಲಮಂಗಲ ತಾಲ್ಲೂಕಿನಲ್ಲಿ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಮಾತನಾಡಿದ ಉಪಲೋಕಾಯುಕ್ತರು
ರಾಜ್ಯಾದ್ಯಂತ ಲೋಕಾಯುಕ್ತದಲ್ಲಿ 25 ಸಾವಿರ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಸುಮಾರು 10 ಸಾವಿರ ಸುಳ್ಳು ಕೇಸ್‌ಗಳು ಇವೆ. ಸುಳ್ಳು ಕೇಸ್ ಗಳಿಂದ ನಿಜ ಕೇಸ್ಗಳು ವಿಳಂಬವಾಗುತ್ತಿವೆ. ಜೊತೆಗೆ ನಿಷ್ಠಾವಂತ ಅಧಿಕಾರಿಗಳು ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿವೆ.ಸುಳ್ಳು ಕೇಸ್ ಸಾಬೀತಾದರೆ ಆರು ತಿಂಗಳಿಂದ ಮೂರು ವರ್ಷ ಜೈಲು ಶಿಕ್ಷೆ, ಜೊತೆಗೆ ಐದು ಸಾವಿರ ದಂಡ ವಿಧಿಸಬಹುದು. ಕೋರ್ಟ್ ನಲ್ಲಿ ಕೇಸ್ ಇರುವಾಗ ಲೋಕಾಯುಕ್ತ ಸಂಸ್ಥೆಯಲ್ಲಿ ಕೇಸ್ ವಿಚಾರಣೆ ಮಾಡಲು ಬರುವುದಿಲ್ಲ. ಹಾಗಾಗಿ ಸಾರ್ವಜನಿಕರು ಸುಳ್ಳು ಕೇಸ್ ಗಳನ್ನ ದಾಖಲಿಸಬೇಡಿ ಎಂದರು.
ಮಾಜಿ ಸೈನಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಬೇಕಾದ ನಿವೇಶನ, ಪಿಂಚಣಿ ಇತರೆ ಸರ್ಕಾರಿ ಸವಲತ್ತು ನೀಡಲು ವಿಳಂಬ ಧೋರಣೆ ಹಾಗೂ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು. ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು ಪ್ರತಿ ದಿನ ಕಚೇರಿಗಳಿಗೆ ಅಲೆದಾಡಿರುವುದು ಅವರಿಗೆ ಅಗೌರವ ತೋರಿಸಿರುವುದು ಸಹಿಸಲು ಸಾಧ್ಯವಿಲ್ಲ. ಹಾಗಾಗಿ 175 ತಾಲೂಕುಗಳ ತಹಶೀಲ್ದಾರ್ ಗಳ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ ಎಂದರು.
ಲೋಕಾಯುಕ್ತ ಸಂಸ್ಥೆ ಜನಸೇವೆಗಾಗಿ ಇದೆ. ತಾರತಮ್ಯ ಸಹಿಸುವುದಿಲ್ಲ ಕಾನೂನು ಮುಂದೆ ಎಲ್ಲರೂ ಸಮಾನರು. ಹಿಂದೆ ಮುಖ್ಯ ಮಂತ್ರಿ, ಸಚಿವರನ್ನು ಸಹ ಜೈಲಿಗೆ ಕಳುಹಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ನಿಮ್ಮ ಕೆಲಸವನ್ನು ಕಾಯ,ವಾಚ ಮನಸ್ಸಿನಿಂದ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು.
ಪ್ರಜಾಪ್ರಭುತ್ವದ ನಾಲ್ಕು ಅಂಗಗಳ ವೈಫಲ್ಯದಿಂದ ಜನಕ್ಕೆ ಸರಿಯಾಗಿ ಕಾಲಕಾಲಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬ ಭಾವನೆ ಬಂದಿದೆ ಅದಕ್ಕಾಗಿ ನಾವೆಲ್ಲರೂ ತ್ವರಿತವಾಗಿ ಅವರ ಹಕ್ಕು ಪಡೆದುಕೊಳ್ಳಲು ಉಪಕರಿಸಬೇಕು.
ಚುನಾವಣೆ ಸಂದರ್ಭದಲ್ಲಿ ದುಡ್ಡು ತೆಗೆದುಕೊಂಡು ಓಟು ಹಾಕುವುದನ್ನು ಮೊದಲು ಬಿಡಬೇಕು. ಪಾರದರ್ಶಕ ಜನಪ್ರತಿನಿಧಿಗಳು, ಅಧಿಕಾರಿಗಳ ಆಯ್ಕೆ ನಿಮ್ಮ ಕೈಯಲ್ಲಿದೆ. ಸಮಾಜದ ಮನಸ್ಥಿತಿ, ವ್ಯವಸ್ಥೆ ಬದಲಾಗಬೇಕಿದೆ. ಸಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಅಣಿಯಾಗ ಬೇಕು ಎಂದರು.
ಸರ್ಕಾರಿ ಭೂಮಿ ಒತ್ತುವರಿ, ಸರ್ಕಾರಿ ರಸ್ತೆ ಕಬಳಿಕೆ, ಅಕ್ರಮ ಖಾತೆ, ಈ ಖಾತೆ, ಹಕ್ಕು ಪತ್ರ ವಿತರಣೆ, ಪೋಡಿ ದುರಸ್ತಿ, ಕಾನೂನು ಬಾಹಿರ ಚಟುವಟಿಕೆ, ಅಧಿಕಾರಿಗಳ ಕಿರುಕುಳ, ಸರ್ವೆ ಕಾರ್ಯ ಸಂಬಂಧಿಸಿದಂತೆ ನೆಲಮಂಗಲ ತಾಲ್ಲೂಕು ವ್ಯಾಪ್ತಿಯ 123 ಪ್ರಕರಣಗಳ ವಿಲೇವಾರಿ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಶಿಕೃಷ್ಣ, ಉಪ ನಿಬಂಧಕರಾದ ಅರವಿಂದ್ ಎನ್.ವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶ್ರೀ ಶೈಲ್ ಭೀಮಸೇನ ಬಗಾಡಿ, ಎಎಸ್ಪಿ ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಅರ್ಜಿದಾರರು ಹಾಜರಿದ್ದರು.