ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿಲ್ಲದ ಕಾರಣ ಜನಸಂಖ್ಯೆ ಕಡಿಮೆಯಾಗಿದ್ದು, ನಮಗೆ ರಾಜಕೀಯ ಶಕ್ತಿ ಇದ್ದರೆ ಮಾತ್ರ ನಮಗೆ ಸಂಪೂರ್ಣ ನ್ಯಾಯ ಸಿಗಲು ಸಾಧ್ಯ. ಈಗ ಸಂವಿಧಾನದಲ್ಲಿ ಆರು ಧರ್ಮಗಳಿವೆ ಅವು ಮಾತ್ರ ಅಂಗೀಕೃತವಾಗುತ್ತವೆ. ಹಿಂದೂ ಪರಂಪರೆಯಿಂದ ಬಂದಂತಹ ವೀರಶೈವ ಲಿಂಗಾಯತರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು. ಜಾತಿ ಕಾಲಂ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಉಪ ಪಂಗಡದಲ್ಲಿ ನಿಮ್ಮ ಮೀಸಲಾತಿಗೆ ಅವಕಾಶ ಇರುವಂತೆ ಬರೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿಂಗಾಲೇಶ್ವರ ಗುರುಗಳು ಒಂದು ಸಾಹಸ ಮಾಡುತ್ತಿದ್ದಾರೆ. ಒಂದು ಗಟ್ಟಿಯಾದ ಬೆಸುಗೆ ಹಾಕಿ ವೀರಶೈವ ಲಿಂಗಾಯತರು ಒಂದಾಗಿರಬೇಕು ಎಂದು ಈ ಸಾಹಸ ಮಾಡಿದ್ದಾರೆ. ಅದಕ್ಕೆ ವೀರಶೈವ ಮಹಾಸಭಾ ಹೆಗಲು ಕೊಟ್ಟು ನಿಂತಿದೆ ಇದು ಸಂತಸದ ವಿಚಾರ ಎಂದು ಹೇಳಿದರು.
ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಹಳ ದೊಡ್ಡದಿದೆ. ಅದರ ಒಂದು ಅರ್ಥ ಇವತ್ತಿನ ಪೀಳಿಗೆಗೆ ನಾವು ತಿಳಿಸಿಕೊಡುವುದು ಮುಖ್ಯವಾಗಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸುವುದು ವೀರಶೈವ ಲಿಂಗಾಯತರ ಸಂಸ್ಕೃತಿ ಮತ್ತು ಸಂಸ್ಕಾರ, ಇವತ್ತು ಆ ಸಹನೆ ಮತ್ತು ಸಂಸ್ಕೃತಿ ಕಡಿಮೆಯಾಗಿದೆ. ನಮ್ಮದು ವಿಶಾಲವಾದ ಮನೊಭಾವ, ಕ್ಷಮೆ ಬಹಳ ಸುಲಭವಾಗಿ ಮಾಡುತ್ತೇವೆ. ಆದರೆ, ಒಂದೊಂದು ಸಂದರ್ಭದಲ್ಲಿ ಇದೆ ನಮ್ಮ ದೌರ್ಭಲ್ಯವಾಗುತ್ತದೆ. ನಮ್ಮಲ್ಲಿ ಒಕ್ಕಟ್ಟಿದ್ದರೆ, ನಮ್ಮ ಭಾವನೆಗಳು ಒಂದಾಗಿದ್ದರೆ, ಯಾರೂ ಕೂಡ ನಮ್ಮನ್ನು ಮುಟ್ಟುವ ಸಾಹಸ ಮಾಡುವುದಿಲ್ಲ. ಮೂವತ್ತು ಪರ್ಸೆಂಟ್ ಇದ್ದವರು ಈಗ ಹತ್ತು ಪಸೆರ್ಂಟ್‌ಗೆ ಇಳಿದಿದ್ದೇವೆ ಎಂದು ಗುರುಗಳು ಹೇಳಿದರು. ನಮ್ಮಲ್ಲಿ ಒಕ್ಕಟ್ಟು ಇಲ್ಲದೇ ಇರುವುದು ಅದಕ್ಕೆ ಕಾರಣ. ಗೋಡೆಯಲ್ಲಿ ಬಿರುಕು ಬಿದ್ದರೆ ಇರುವೆ, ಇಲಿಗಳೂ ಹೋಗುತ್ತವೆ. ಈಗ ಸಮೀಕ್ಷೆ ಬಂದಿದೆ ಎಂದು ಸೇರುವುದಲ್ಲ. ನಮ್ಮ ಆತ್ಮದ ಸಮೀಕ್ಷೆ ಮಾಡಿಕೊಳ್ಳಬೇಕು.
ನಮ್ಮ ಪರಂಪರೆ ಏನು, ನಮ್ಮ ಕೈ ಭೂಮಿಯ ಕಡೆಗೆ ನೋಡುತ್ತಿತ್ತು. ಈಗ ನಾವು ಎಲ್ಲಿದ್ದೇವೆ ಎಂದು ನೋಡಿಕೊಳ್ಳಬೇಕು. ಎಲ್ಲರ ರೀತಿ ಸರಿ ಸಮಾನವಾಗಿ ನಿಂತಿದ್ದೇವೊ ಅಥವಾ ಕೆಳಗೆ ಇದ್ದೇವೆ ಎಂದು ಆತ್ಮ ಸಮೀಕ್ಷೆ ಮಾಡಿಕೊಳ್ಳಬೇಕು. ನಮ್ಮವರು ತಡವಾಗಿ ಏಳುತ್ತಾರೆ. ಎದ್ದರೆ ಮಾತ್ರ ಮಲಗುವುದಿಲ್ಲ. ಯಾರನ್ನು ಮಲಗಿಸಬೇಕೊ ಅವರನ್ನು ಮಲಗಿಸಿಯೇ ವಿಶ್ರಾಂತಿ ಪಡೆಯುವುದು ಈ ಸಂದೇಶ ನಾವು ಕಳಿಸಬೇಕಿದೆ ಎಂದು ಹೇಳಿದರು.
ಧರ್ಮದ ಆಧಾರ ಮುಖ್ಯವಲ್ಲ
ಆರ್ಥಿಕ ಸಾಮಾಜಿಕ ಸಮಿಕೆಯಲ್ಲಿ ಯಾವ ಸಮಾಜ ಶೈಕಣಿಕ, ಆರ್ಥಿಕವಾಗಿ ಎಷ್ಟು ಮುಂದಿದೆ ಬಡವರನ್ನು ಹೇಗೆ ಸರಿ ಸಮಾನ ಮಾಡಬೇಕು ಎಂದು ಸಮೀಕ್ಷೆ ಮಾಡುತ್ತಾರೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಜಾತಿ ಬಹಳ ಮುಖ್ಯವಲ್ಲ. ಆದರೆ, ಹಿಂದುಳಿದವರನ್ನು ಮುಂದೆ ತರಲು ಅವರನ್ನು ಗುರುತಿಸುವುದು ಮುಖ್ಯ ಎಂದು ಹೇಳುತ್ತಾರೆ.
ರಾಜ್ಯ ಸರ್ಕಾರಗಳು ಹಲವಾರು ಆದೇಶಗಳನ್ನು ಮಾಡುತ್ತವೆ. ಆದರೆ, ಕೋರ್ಟ್‌ನಲ್ಲಿ, ಕೇಂದ್ರ ಸರ್ಕಾರದಲ್ಲಿ ಬಿದ್ದು ಹೋಗುತ್ತವೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಬಹಳ ದಿನಗಳಿಂದ ಇದೆ. ಸಂವಿಧಾನದ ಪ್ರಕಾರ ಆರೇ ಧರ್ಮ ಇವೆ. ಹಿಂದು, ಇಸ್ಲಾಂ, ಕ್ರೈಸ್ಟ್, ಸಿಖ್, ಜೈನ, ಬೌದ್ಧ, ಇದರ ನಂತರ ಯಾವುದೇ ಧರ್ಮಕ್ಕೆ ಮಾನ್ಯತೆ ಕೊಟ್ಟಿಲ್ಲ.
ಪ್ರಜಾಪಭುತ್ವದಲ್ಲಿ ಜನರ ಇಚ್ಚಾಶಕ್ತಿಯೇ ಅಂತಿಮ. ಆ ಆಶಾಭಾವನೆಯಿಂದ ನಾವು ಇರೋಣ. ಆದರೆ, ಇವತ್ತಿನ ಈ ಸಮೀಕ್ಷೆ ಧರ್ಮದ ಆಧಾರದ ಮೇಲೆ ಲೆಕ್ಕಕ್ಕೆ ಬರುವುದಿಲ್ಲ. ನೀವು ಯಾವುದೇ ಧರ್ಮಕ್ಕೆ ಸೇರಿದರೂ ಲೆಕ್ಕಕ್ಕೆ ಬರುವುದಿಲ್ಲ. ನೀವು ಯಾವ ಉಪ ಪಂಗಡಕ್ಕೆ ಸೇರಿದ್ದೀರಿ ಅನ್ನುವುದು ಮುಖ್ಯ ಅಲ್ಲಿ ನಮ್ಮ ಸಂಖ್ಯೆ ತೋರಿಸುವುದು ಮುಖ್ಯವಾಗಿದೆ. ನಮ್ಮ ಕಾಯಕ ಸಮಾಜಗಳನ್ನು ಒಡೆದು ಹಾಕಿದ್ದಾರೆ. ಕಳೆದ ಬಾರಿ ಆಗಿರುವ ದೋಷಗಳನ್ನು ಸರಿಪಡಿಸಬೇಕಿದೆ. ಜಾತಿಯ ವಿಚಾರದಲ್ಲಿ ವೀರಶೈವ ಲಿಂಗಾಯತ ಎಂದು ಹೇಳಲೇಬೇಕು. ನಿಮ್ಮ ಉಪ ಪಂಗಡಗಳನ್ನು ಹೇಳಿಕೊಳ್ಳಲು ಮಹಾಸಭೆ ಅವಕಾಶ ನೀಡಿದೆ. ಅದನ್ನು ನೀಡು ಮಾಡಬಹುದು ಎಂದು ಹೇಳಿದರು.
ಕೇಂದ್ರದ ಗಣತಿ ಮುಖ್ಯ
ಇದರ ಹೊರತಾಗಿ ಕೇಂದ್ರ ಸರ್ಕಾರ ನಡೆಸುವ ಗಣತಿ ಜನೇವರಿಯಲ್ಲಿ ಬರುತ್ತದೆ. ಅದು ಅತ್ಯಂತ ಮುಖ್ಯ ಅದು ಇಪ್ಪತ್ತು ಮೂವತ್ತು ವರ್ಷ ಇರುತ್ತದೆ. ಅದಕ್ಕೂ ಮೊದಲು ಅಖಿಲ ಭಾರತ ವೀರಶೈವ ಮಹಾಸಭೆ ಎಲ್ಲ ಉಪ ಪಂಗಡಗಳನ್ನು, ಸ್ವಾಮೀಜಿಗಳನ್ನು ಕರೆದು ಸಭೆ ಕರೆದು ಒಂದೇ ತೀರ್ಮಾನ ತೆಗೆದುಕೊಳ್ಳಬೇಕು. ನಾವು ಏನೇ ತೀರ್ಮಾಣ ಮಾಡಿದರೂ ಸಂವಿಧಾನಬದ್ಧವಾಗಿರಬೇಕು, ಕಾನೂನು ಬದ್ಧವಾಗಿರಬೇಕು.
ನಮ್ಮ ಸಮಾಜದ ಬಡವರು, ಯುವಕರು, ಹೆಣ್ಣು ಮಕ್ಕಳಿಗೆ ಒಳ್ಳೆಯ ಭವಿಷ್ಯ ನಿರ್ಮಿಸಬೇಕು. ಆರ್ಥಿಕ ಸಾಮಾಜಿಕವಾಗಿ ಅವರು ಮುಂದೆ ಬರಬೇಕು ಎಂದು ನಾವು ನಿರ್ಣಯ ಮಾಡಬೇಕು. ಅದರಿಂದ ನಮ್ಮ ಮಕ್ಕಳಿಗೆ ಅನುಕೂಲವಾಗಬೇಕು. ಅತಿ ಬುದ್ದಿವಂತೆ ಒಮ್ಮೊಮ್ಮೆ ಸಮಸ್ಯೆಯಾಗುತ್ತದೆ.
ವಸ್ತು ನಿಷ್ಠವಾಗಿ ನಾವು ನಿರ್ಣಯವನ್ನು ಮಾಡಬೇಕು. ಆ ನಿಟ್ಟಿನಲ್ಲಿ ಸಚಿವರಾದ ಈಶ್ವರ ಖಂಡ್ರೆಯವರು ವಸ್ತುನಿಷ್ಠವಾಗಿ ತೀರ್ಮಾಣ ತೆಗೆದುಕೊಂಡಿದ್ದಾರೆ. ಇದೇ ರೀತಿ ಮುಂದಿನದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದರು.
ರಾಮ ಮನೋಹರ ಲೋಹಿಯಾ ಅವರು ಸಂಸತ್ತಿನಲ್ಲಿ ಪೊಲಿಟಿಕ್ಸ್ ಇಸ್ ಶಾರ್ಟ್ ಟೈಮ್ ರಿಲೀಜನ್, ರಿಲಿಜನ್ ಇಸ್ ಲಾಂಗ್ ಟೈವರ್ ಪೊಲಿಟಿಕ್ ಅಂತ ಹೇಳಿದ್ದರು. ಆದ್ದರಿಂದ ನಮಗೆ ರಾಜಕೀಯ ಶಕ್ತಿ ಇದ್ದಾಗ ನಮ್ಮ ಸಮಾಜಕ್ಕೆ ಸಂಪೂರ್ಣ ನ್ಯಾಯ ಸಿಗಲು ಸಾಧ್ಯ. ಆ ದಿನಗಳು ಬಂದಾಗ ಅಖಂಡ ವೀರಶೈವ ಮಹಾಸಭಾದ ಭವ್ಯ ಭವಿಷ್ಯಕ್ಕಾಗಿ ಒಕ್ಕಟಿನಿಂದ ಆ ಕೆಲಸ ಮಾಡಬೇಕು. ಈಗ ಸಂವಿಧಾನದಲ್ಲಿ ಏನು ಧರ್ಮಗಳಿವೆ ಅವು ಮಾತ್ರ ಅಂಗೀಕೃತವಾಗುತ್ತದೆ. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಉಪ ಜಾತಿ ಕಾಲಂ ನಲ್ಲಿ ನಿಮ್ಮ ಉಪಜಾತಿಗೆ ಮೀಸಲಾತಿಗೆ ಅನುಕೂಲವಾಗುವಂತಹ ನಿರ್ಣಯ ಮಾಡಬೇಕು ಎಂದು ಹೇಳಿದರು.
ಆಚಾರ ವಿಚಾರ ಒಂದೇ
ನಾನು ದಾವಣಗೆರೆಯಲ್ಲಿ ಒಂದು ಮಾತು ಹೇಳಿದ್ದೆ, ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದರು, ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದರು. ರೇಣುಕಾಚಾರ್ಯ ಬಸವಣ್ಣ ಇಬ್ಬರೂ ಒಂದೇ ಹೇಳಿದಾಗ ನಾವ್ಯಾರು ಅದನ್ನು ಬೇರೆ ಅನ್ನಲು. ಇಬ್ಬರೂ ಲಿಂಗಪೂಜೆ ಮಾಡುತ್ತಾರೆ. ಆ ಲಿಂಗ ಪೂಜೆಯಲ್ಲಿ ಮಹದೇವನ ಆವಿಷ್ಕಾರ ಇದೆ. ವಿಚಾರ, ಆಚಾರ ಒಂದೇ ಇದೆ. ಬೇಕಾಗಿರುವಂಥದ್ದು ನಡೆ ನುಡಿ ಒಂದಾಗಬೇಕು.
ಅಖಿಲ ಭಾರತ ವೀರಶೈವ ಮಹಾಸಭೆ ಮಾರ್ಗದರ್ಶಕ ಇದ್ದ ಹಾಗೆ, ಬರುವ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರಿಗೂ ಆಶಾಕಿರಣವಾಗುವಂತಹ ನಮ್ಮ ಸಮಾಜದ ಬಡವರಿಗೆ ಸರ್ಕಾರದ ವ್ಯವಸ್ಥೆಯಲ್ಲಿ ಹೇಗೆ ಸಹಾಯ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಯೋಚನೆ ಮಾಡಲಿ, ಇಲ್ಲದವರಿಗೆ ಸರ್ಕಾರದ ಮಟ್ಟದಲ್ಲಿ ಹೇಗೆ ಅನುಕೂಲ ಮಾಡಿಕೊಳ್ಳಬೇಕು ಎನ್ನುವುದನ್ನು ಎಲ್ಲರೂ ವಿಚಾರ ಮಾಡಬೇಕು.
ಮಹಾಸಭೆ ಹಾಗೂ ಸ್ವಾಮೀಜಿಗಳು ಸೇರಿದ್ದು ಹಾಲು ಜೇನು ಸೇರಿದಂತಾಗಿದೆ. ಇವೆರಡೂ ಸೇರಿದರೆ ಅದೇ ಅಮೃತ ಘಳಿಗೆ. ಈಗ ಅಮೃತ ಘಳಿಗೆ ಬಂದಿದೆ ಎಂದು ಹೇಳಿದರು.