ಶ್ರೀರಂಗಪಟ್ಟಣ: ಜಿಲ್ಲಾಡಳಿತದಿಂದ ಶ್ರೀರಂಗ ಪಟ್ಟಣ ದಸರಾದ (Dasara) ಅಂಗವಾಗಿ ಸೆಪ್ಟೆಂಬರ್ 25ರಿಂದ 28ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ.25ರಂದು ಬೆಳಗ್ಗೆ 7.00ರಿಂದ 9 ಗಂಟೆಯವರೆಗೆ ತಾಲೂಕು ಕ್ರೀಡಾಂಗಣದಿಂದ ಗಂಜಾಂ ಮಾರ್ಗವಾಗಿ ಕರಿಘಟ್ಟ ದೇವಸ್ಥಾನದವರೆಗೆ 29 ವರ್ಷದೊಳಗಿನವರಿಗೆ (ಯುವಕ -ಯುವತಿಯರಿಗೆ )ಮತ್ತು 30 ವರ್ಷ ಮೇಲ್ಪಟ್ಟವರಿಗೆ (ಪುರುಷ-ಮಹಿಳೆಯರಿಗೆ) సిటో ಇಂಡಿಯಾ ಮ್ಯಾರಾಥಾನ್ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ 12.30 ಗಂಟೆಗೆ ಶ್ರೀರಂಗಪಟ್ಟಣ ಕಿರಂಗೂರು ಬನ್ನಿಮಂಟಪದಲ್ಲಿ ನಂದಿಧ್ವಜ ಪೂಜೆ, ಮಧ್ಯಾಹ್ನ 2.30 ರಿಂದ 3ವರೆಗೆ ಕಿರಂಗೂರು ಬನ್ನಿಮಂಟಪದಲ್ಲಿ ಜಂಬೂಸವಾರಿ ಮೆರವಣಿಗೆ ಹಾಗೂ ದಸರಾ ಉದ್ಘಾಟನೆ ನಡೆಯಲಿದೆ. ದಸರಾ ಮಹೋತ್ಸವದಲ್ಲಿ ಮಹೇಂದ್ರ (ಅಂಬಾರಿ ಆನೆ), ಕಾವೇರಿ, ಲಕ್ಷ್ಮಿ ಆನೆಗಳಿಂದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹದ ಮೆರವಣಿಗೆ ನಡೆಯಲಿದೆ.
ವಿವಿಧ ಕಲಾತಂಡಗಳಾದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ, ಗೊಂಬೆ, ತಮಟೆ, ದೊಣ್ಣೆ ವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಹಾಗೂ ಸ್ತಬ್ದ ಚಿತ್ರಗಳ ಮೆರವಣಿಗೆಗೆ ಮೆರಗು ನೀಡಲಿದೆ.
ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿನ ಆವರಣದ ಶ್ರೀರಂಗ ವೇದಿಕೆಯಲ್ಲಿ ಸಂಜೆ 6:00ಗಂಟೆಗೆ ದಸರಾ ಮತ್ತು ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಂಜೆ 7:00 ಗಂಟೆಗೆ ಕಥಕ್ ಶೈಲಿಯಲ್ಲಿ ಚಾಮುಂಡೇಶ್ವರಿ ನೃತ್ಯ. ರಾತ್ರಿ 8.30 ರಿಂದ 11 ಗಂಟೆಯವರೆಗೆ ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.