ರಾಮನಗರ: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ. 22ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Social and educational survey) ಹಲವು ಶಿಕ್ಷಕರಿಗೆ ಕಬ್ಬಿಣದ ಕಡಲೆಯಾಗಿದೆ.
ಆದರೆ ಇಲ್ಲೊಬ್ಬ ಶಿಕ್ಷಕಿ ತಮಗೆ ವಹಿಸಿದ ಮನೆಗಳನ್ನು ಕೇವಲ 7 ದಿನದಲ್ಲಿ ಪೂರ್ಣಗೊಳಿಸುವ ಮೂಲಕ ಹಿರಿಯ ಅಧಿಕಾರಿಗ ಪ್ರಶಂಸೆಗೆ ಕಾರಣರಾಗಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕಿ ಶಾಂತಮ್ಮ 7 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕಿ.
ಶಿಕ್ಷಕಿಯ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು, ಶಾಂತಮ್ಮ ಅವರನ್ನು ಸೋಮವಾರ ತಮ್ಮ ಕಚೇರಿಗೆ ಕರೆದು ವೈಯಕ್ತಿಕವಾಗಿ ರೂ.1,001 ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶಾಂತಮ್ಮ ಅವರಿಗೆ ಚನ್ನಪಟ್ಟಣ ತಾಲ್ಲೂಕಿನ ಹೊಡಿಕೆ ಹೊಸಹಳ್ಳಿ, ಚನ್ನಂಕೇಗೌಡನದೊಡ್ಡಿ ಹಾಗೂ ಗೋವಿಂದೇಗೌಡನದೊಡ್ಡಿ ಗ್ರಾಮದ 86 ಮನೆಗಳನ್ನು ಸಮೀಕ್ಷೆ ಮಾಡುವಂತೆ ನಿಗದಿಪಡಿಸಲಾಗಿತ್ತು. ಸಮೀಕ್ಷೆ ಪೂರ್ಣಕ್ಕೆ 15 ದಿನಗಳಿದ್ದರೂ, ಶಾಂತಮ್ಮ ಅವರು ಅವಧಿಗೂ ಮುಂಚೆ ಕೇವಲ ಏಳೇ ದಿನದಲ್ಲಿ ಅಷ್ಟೂ ಮನೆಗಳ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ಮುಗಿಸಿದ್ದಾರೆ.