ಬೆಂಗಳೂರು: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಭೀಮಾ ಹಾಗೂ ಕೃಷ್ಣಾ ನದಿಗಳಲ್ಲಿ ಪ್ರವಾಹ (Flood) ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಮಂಗಳವಾರ ಹೆಲಿಕಾಪ್ಟರ್ ಮೂಲಕ ಸಂಚರಿಸಿ ವಿವಿಧ ಭಾಗಗಳಲ್ಲಿ ಪರಿಸ್ಥಿತಿ ಅವಲೋಕನ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಪ್ರವಾಹದಿಂದಾಗಿ ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ವಿಮಾನನಿಲ್ದಾಣದಲ್ಲೇ ಪ್ರಾಥಮಿಕ ಸಭೆ ನಡೆಸಿ ವಿವರವಾದ ಮಾಹಿತಿ ಪಡೆದರು.
ಕಲಬುರಗಿ, ಬೀದರ್, ಯಾದಗಿರಿ ಹಾಗು ವಿಜಯಪುರ ಜಿಲ್ಲಾ ಅಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿದ್ದು ವಿವರಗಳನ್ನು ನೀಡಿದರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾದ ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಅವರ ಜೊತೆಯಲ್ಲಿ ಮೊದಲ ಸುತ್ತಿನ ವೈಮಾನಿಕ ಸಮೀಕ್ಷೆಗೆ ತೆರಳಿದರು. ಇದಾದ ಬಳಿಕ ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿನ ಬೆಳೆ ಹಾನಿ ಕುರಿತು ಎರಡನೇ ಸುತ್ತಿನ ವೈಮಾನಿಕ ಸಮೀಕ್ಷೆಯನ್ನು ಮಧ್ಯಾಹ್ನ 2:30 ರ ಸುಮಾರಿಗೆ ಕೈಗೊಂಡರು.
ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ನಂತರ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು: ಆರ್.ಅಶೋಕ
ಸಿಎಂ ಸಿದ್ದರಾಮಯ್ಯ ಮೊದಲು ಪರಿಹಾರ ಘೋಷಣೆ ಮಾಡಿ ನಂತರ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಪರಿಹಾರವನ್ನೇ ತಿಳಿಸದೆ ಕೇವಲ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಗಿರುವ ಪ್ರವಾಹದ ಸ್ಥಿತಿ ವೀಕ್ಷಿಸಲು ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ. ಎಲ್ಲ ರಸ್ತೆಗಳಲ್ಲಿ ಗುಂಡಿ ಇರುವುದರಿಂದ ಹಾಗೂ ರಸ್ತೆ ತಡೆದು ಜನರು ಪ್ರತಿಭಟಿಸುವುದರಿಂದ ಭಯಗೊಂಡ ಮುಖ್ಯಮಂತ್ರಿ ಹೆಲಿಕಾಪ್ಟರ್ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಜೋಳ ತೊಗರಿ ಸೇರಿದಂತೆ ಪ್ರತಿ ಬೆಳೆಗಳ ಹಾನಿ, ಮನೆ ಹಾನಿ, ಶಾಲೆ ಹಾನಿಗೆ ಎಷ್ಟು ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಬೇಕಿತ್ತು. ಆದರೆ ಈವರೆಗೆ ಸರ್ಕಾರ ಆದೇಶ ಮಾಡಿಲ್ಲ. ಒಂದು ಕಡೆ ಖಜಾನೆ ಖಾಲಿಯಾಗಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲು ಸಿದ್ಧತೆ ನಡೆದಿದೆ ಎಂದು ದೂರಿದರು.
ಮುಖ್ಯಮಂತ್ರಿಗಳು ಸಚಿವರ ತಂಡ ರಚಿಸಬೇಕಿತ್ತು. ಅಧಿಕಾರಿಗಳ ಸಭೆ ಕರೆದು ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕಿತ್ತು. ಪುನರ್ವಸತಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಬೇಕಿತ್ತು. ಏನೂ ಮಾಡದೆಯೇ ಹೆಲಿಕಾಪ್ಟರ್ನಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ. ಈ ಸರ್ಕಾರ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದರು.
ಅಕ್ಟೋಬರ್ ಕ್ರಾಂತಿ
ಕಾಂಗ್ರೆಸ್ನಲ್ಲಿ ಅಕ್ಟೋಬರ್ ಕ್ರಾಂತಿಯಾಗುವ ಲಕ್ಷಣಗಳು ಕಂಡುಬಂದಿವೆ. ಕ್ರಾಂತಿಯ ನಂತರ ಸಿಎಂ ಬದಲಾವಣೆಯಾಗುವ ಲಕ್ಷಣವಿದೆ. ಸರ್ಕಾರ ಅಸ್ಥಿರಗೊಂಡು ಬಿದ್ದುಹೋದರೆ ಚುನಾವಣೆ ಮಾಡುವುದು ಸೂಕ್ತ. ನಾವು ಕಾಂಗ್ರೆಸ್ನಂತೆ ಸರ್ಕಾರ ಬೀಳಿಸಲು ಹೋಗಲ್ಲ. ಎರಡೂವರೆ ವರ್ಷಗಳಲ್ಲಿ ಸರ್ಕಾರ ಟೇಕಾಫ್ ಆಗಿಲ್ಲ. ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವುದು ಸೂಕ್ತ ಎಂದರು.
ಜಾತಿ ಸಮೀಕ್ಷೆಯಲ್ಲಿ ಸರ್ಕಾರ ಅನಗತ್ಯವಾದ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಜಾತಿ ಸಮೀಕ್ಷೆಯಲ್ಲಿ ತೀರಾ ವೈಯಕ್ತಿಕ ವಿಷಯ ಕೇಳಿದರೆ ಜನರು ಮಾಹಿತಿ ನೀಡದೇ ಇರಬಹುದು. ಇದು ಜನರಿಗೆ ಬಿಟ್ಟ ವಿಚಾರ ಎಂದು ಕೋರ್ಟ್ ಕೂಡ ಹೇಳಿದೆ. ಕೇಂದ್ರ ಸರ್ಕಾರ ಸಂವಿಧಾನದ ಪ್ರಕಾರ ತನ್ನ ಅಧಿಕಾರ ಚಲಾಯಿಸಿ ಜಾತಿ ಗಣತಿ, ಜನ ಗಣತಿ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಸಮೀಕ್ಷೆಯ ಅಧಿಕಾರವೇ ಇಲ್ಲ ಎಂದರು.
ಸಮೀಕ್ಷೆ ಮಾಡುವವರಿಗೆ ತರಬೇತಿ ನೀಡಿಲ್ಲ. ಸಮೀಕ್ಷೆ ಮಾಡದ ಸಿಬ್ಬಂದಿಯನ್ನು ಅಮಾನತು ಮಾಡುತ್ತೇವೆ ಎಂದು ಬೆದರಿಕೆ ಒಡ್ಡಲಾಗಿದೆ. ರಾಜ್ಯ ಸರ್ಕಾರದಿಂದ ಸಮೀಕ್ಷೆ ಅಗತ್ಯವೇ ಇರಲಿಲ್ಲ. ಎರಡು ಕೋಟಿ ಮನೆಗಳ ಹಣೆಬರಹವನ್ನು ಎರಡೇ ದಿನಗಳಲ್ಲಿ ಬರೆಯಲು ಮುಂದಾಗಿದ್ದಾರೆ. ಜಾತಿ ಸಮೀಕ್ಷೆಯ ಕಾಲಂಗಳಲ್ಲಿ ಕೇವಲ ಜಾತಿ/ಧರ್ಮಕ್ಕೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಸಾಮಾಜಿಕ-ಶೈಕ್ಷಣಿಕದ ಅಂಶಗಳಿಲ್ಲ. ಸಮೀಕ್ಷೆ ಮುಗಿದ ನಂತರ ವರದಿಯನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಜಾತಿ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ, ಆದರೆ ಜಾತಿ/ಧರ್ಮ ಒಡೆಯುವ ಅಜೆಂಡಾಗೆ ನಮ್ಮ ವಿರೋಧವಿದೆ. ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದು, ಆ ನಡೆಯನ್ನೇ ಇಲ್ಲಿ ತೋರಿದ್ದಾರೆ. ಸಂವಿಧಾನದ ಅಡಿಯಲ್ಲಿ ಯಾವುದೇ ಜಾತಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಲು ನಮ್ಮ ಅಭ್ಯಂತರವಿಲ್ಲ ಎಂದರು.
ಬೆಂಗಳೂರಿನ ರಸ್ತೆ ಗುಂಡಿಗಳು ಸಾವಿನ ಗುಂಡಿಗಳಾಗಿವೆ. ಬೆಂಗಳೂರಿನಲ್ಲಿ ಒಬ್ಬ ಯುವತಿ ರಸ್ತೆ ಗುಂಡಿಯಿಂದಾಗಿ ಜೀವ ಕಳೆದುಕೊಂಡಿದ್ದಾಳೆ. ಈ ಸಾವಿಗೆ ಕಾರಣ ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಬೈಕ್ನಲ್ಲಿ ಓಡಾಡಿದರೂ, ಸಿಎಂ ನಗರ ಪ್ರದಕ್ಷಿಣೆ ಮಾಡಿದರೂ ಪ್ರಯೋಜನವಾಗಿಲ್ಲ. ಬಿಜೆಪಿ ಅವಧಿಯಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಅದಾದ ನಂತರ ಗುಂಡಿಗಳು ಉಂಟಾಗಿವೆ. ಆದರೂ ಈ ಸರ್ಕಾರ ದುರಸ್ತಿ ಮಾಡಿಲ್ಲ ಎಂದರು.
ಕಲ್ಯಾಣದ ನೆರೆ ಸಂತ್ರಸ್ತರಿಗೆ ಸ್ಪಂದಿಸದ ರಾಜ್ಯ ಸರಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ
ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು ನೆರೆ ಸಂತ್ರಸ್ತರ ನೆರವಿಗೆ ಬನ್ನಿ. ತಕ್ಷಣವೇ ಕಲ್ಯಾಣ ಕರ್ನಾಟಕ್ಕೆ ನೆರೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು; ಕಲ್ಯಾಣ ಕರ್ನಾಟಕದಲ್ಲಿ ನೆರೆ ಸಂಕಷ್ಟದಲ್ಲಿ ಜನರಿದ್ದರೆ ರಾಜ್ಯದಲ್ಲಿರುವ ಸರಕಾರ ʼಕುಂಭಕರ್ಣ ನಿದ್ರೆʼಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಸೇರಿ ಸಂಪುಟದ 36 ಸಚಿವರಿಗೆ ಇವತ್ತು ಜ್ಞಾನೋದಯವಾಗಿದೆ. ಅಷ್ಟೂ ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು? ಮಾಧ್ಯಮಗಳು ಮತ್ತು ಪ್ರತಿಪಕ್ಷಗಳಿಂದ ಸರಕಾರದ ವಿರುದ್ಧ ಟೀಕೆಗಳು ಶುರುವಾದ ಮೇಲೆ ಮುಖ್ಯಮಂತ್ರಿಗಳು ನೆರೆಪೀಡಿತ ಜಿಲ್ಲೆಗಳಿಗೆ ತೆರಳಿ ಏರಿಯಲ್ ಸರ್ವೇ ಮಾಡಿದ್ದಾರೆ. ಆದರೆ, ನೆರೆ ಪ್ರತಿ ವರ್ಷದ ಸಮಸ್ಯೆ. ಕಳೆದ 3 ತಿಂಗಳಿಂದ ಈ ಸರಕಾರ ಗಾಢ ನಿದ್ರೆಯಲ್ಲಿತ್ತು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಸಿಎಂ ಹೇಳಿಕೆ ಬಗ್ಗೆ ನಿರಾಶೆ ಆಗಿದೆ
ಪರಿಹಾರಕ್ಕೆ ಒತ್ತಾಯ ಮಾಡುತ್ತಿರುವ ಪ್ರತಿಪಕ್ಷಗಳ ಬಗ್ಗೆ ಮುಖ್ಯಮಂತ್ರಿ ನೀಡುತ್ತಿರುವ ಉತ್ತರ, ಹೇಳಿಕೆಗಳನ್ನು ನೋಡಿದರೆ ನಿರಾಶೆಯಾಗುತ್ತದೆ. ಪ್ರತಿಪಕ್ಷವನ್ನು ಬೈದರೆ ನೆರೆ ಸಂತ್ರಸ್ತರ ಸಮಸ್ಯೆ ನೀಗುತ್ತದೆಯೇ? ಅವರ ಹೇಳಿಕೆಗಳು ಅವರು ಅಲಂಕರಿಸುವ ಹುದ್ದೆಗೆ ತಕ್ಕುದಾಗಿಲ್ಲ. ಸಂಪುಟದಲ್ಲಿ 36 ಜನ ಮಂತ್ರಿಗಳಿದ್ದಾರೆ. ಅವರೆಲ್ಲರೂ ಎಲ್ಲಿ ಹೋಗಿದ್ದಾರೆ? ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡಿದ್ದು ಸಾಕು ಎಂದು ಗುಡುಗಿದ ಅವರು; ಮೊದಲು ಜಡತ್ವ ಬಿಟ್ಟು ಪ್ರತೀ ಜಿಲ್ಲೆಗೂ ಇಬ್ಬರು-ಮೂವರು ಮಂತ್ರಿಗಳನ್ನು ಕಳಿಸಿ. ವಿಶೇಷ ತಂಡಗಳನ್ನು ನಿಯೋಜಿಸಿ. ಸಚಿವರು ಕನಿಷ್ಠ 3 ದಿನ ಜಿಲ್ಲೆಗಳಲ್ಲಿಯೇ ಮೊಕ್ಕಂ ಹೂಡಲಿ. ಮೊದಲು ಜನರ ಬಳಿಗೆ ಹೋಗಿ ಅವರ ಕಷ್ಟಕ್ಕೆ ಮಿಡಿಯಲಿ ಎಂದು ಒತ್ತಾಯಿಸಿದರು.
ನನಗೆ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದಿದ್ದರೆ ನೆರೆಪೀಡಿತ ಪ್ರದೇಶಗಳಲ್ಲಿ ಕನಿಷ್ಠ ಒಂದು ವಾರ ಕಾಳವಾದರೂ ಕ್ಯಾಂಪ್ ಮಾಡುತ್ತಿದ್ದೆ. ಇನ್ನೊಂದು ಕಡೆ 2 ದಿನಗಳ ಹಿಂದೆಯೇ ನಾನು ನೆರೆ ಪ್ರದೇಶಗಳಿಗೆ ಹೋಗಲು ಸಿದ್ದವಾಗಿದ್ದೆ. ಹವಾಮಾನ ಸರಿ ಇಲ್ಲದ ಕಾರಣ ಅಧಿಕಾರಿಗಳು ಬರಬೇಡಿ ಎಂದರು. ಪ್ರವಾಹ ಬಂದು ಎರಡುಮೂರು ದಿನಗಳು ಆದ ಮೇಲೆ ಮಂತ್ರಿಗಳು ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ. ಹೀಗೆ ಮಾಡಿದರೆ ಹೇಗೆ? ಎಂದು ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಪ್ರಶ್ನೆ ಮಾಡಿದರು.
ಸರಕಾರಕ್ಕೆ ಕಿವಿಮಾತು ಹೇಳಿದ ಹೆಚ್ಡಿಕೆ
ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಕಿವಿಮಾತು ಹೇಳಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಪದೇಪದೆ ಕೇಂದ್ರ ಸರಕಾರದ ಜೊತೆ ಘರ್ಷಣೆ ಮಾಡಿಕೊಳ್ಳಬೇಡಿ. ಅದರಿಂದ ಉಪಯೋಗ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ಇಡಿ. ಸರಿಯಾದ ರೀತಿಯಲ್ಲಿ ಮನವಿ ಕೊಟ್ಟು ಪರಿಹಾರ ಕೇಳಿದರೆ ಕೇಂದ್ರದ ನೆರವು ಸಿಗುತ್ತದೆ. ಮೊದಲು ಒರಟು ಮಾತು ಬಿಡಿ. ಈವರೆಗೂ ರಾಜ್ಯದ ಒಬ್ಬ ಸಚಿವ ಅಥವಾ ಅಧಿಕಾರಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ಲ ಎಂದು ಅವರು ಹರಿಹಾಯ್ದರು.
ಇಷ್ಟೊತ್ತಿಗೆ ಪರಿಹಾರ ಕ್ರಮಗಳು ಕೈಗೊಳ್ಳಬೇಕಿತ್ತು. ಸರಕಾರ, ಮುಖ್ಯಮಂತ್ರಿಗಳು ಇನ್ನಿತರರು ವಿಡಿಯೋ ಕಾನ್ಫರೆನ್ಸ್ ಮಾಡಿ ಗರಂ ಆಗಿದ್ದು ಸಾಕು. ಧಮ್ಕಿ, ಗರಂ ಆದರೆ ಕೆಲಸ ಆಗುತ್ತದೆಯೇ? ಮೊದಲು ನಿಮ್ಮ ಮಂತ್ರಿಗಳನ್ನು ತಂಡಗಳನ್ನಾಗಿ ಮಾಡಿ ಕಳುಹಿಸಿ. ಇವರ ದಮ್ಮು ತಾಕತ್ತುಗಳು ಎಲ್ಲಿಗೆ ಹೋದವು? ಹಿಂದೆ ಪಾದಯಾತ್ರೆ ಮಾಡಿದ್ದರು. ಆದರೆ, ರಾಜ್ಯ ಅಭಿವೃದ್ಧಿ ವಿಷಯ ಬಂದಾಗ ಕೇಂದ್ರವನ್ನು ಸರಿದೂಗಿಸಿಕೊಂಡು ಹೋಗಿಲ್ಲ. ಮೋದಿ ಅವರ ಮೂರನೇ ಅವಧಿಯ ಸರಕಾರ ಬಂದು ಒಂದೂವರೆ ವರ್ಷವಾಯಿತು. ಈ ತನಕ ಯಾವ ಸಚಿವರೂ ಬಂದು ನನ್ನನ್ನು ಭೇಟಿ ಮಾಡಿಲ್ಲ. ಬೈಯುವುದರಿಂದ ಏನು ಆಗಲ್ಲ. ಬದಲಿಗೆ ದೆಹಲಿಗೆ ಬಂದು ಕೇಂದ್ರದ ಜೊತೆ ಮಾತಾಡಿ. ಮೊದಲು ಕೇಂದ್ರಕ್ಕೆ ಮನವಿ ಕೊಡಿ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿ. ಕೇಂದ್ರ ಸ್ಪಂದಿಸುತ್ತದೆ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಬೇಕಿಲ್ಲದ ವಿಷಯಗಳತ್ತ ಹೆಚ್ಚು ಕಾಲ ವ್ಯರ್ಥವಾಗುತ್ತಿದೆ. ಜಾತಿ ಗಣತಿ ಅಂತ ಮಾಡುತ್ತಿದ್ದಾರೆ. ಅದನ್ನು ಮಾಡಲು ಇನ್ನೊಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಈ ಸರಕಾರದಿಂದ ಜನರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ. ಕಾಂತರಾಜು ಆಯೋಗದ ಭಜನೆ ನಿಲ್ಲಿಸಿ. ಗ್ಯಾರಂಟಿ ಕೊಟ್ಟೆವು ಎಂದರು. ಈಗ ಕಲ್ಯಾಣ ಕರ್ನಾಟಕವನ್ನು ಗ್ಯಾರಂಟಿಗಳು ಕಾಪಾಡುತ್ತಿವೆಯೇ? ಅವರಿಗೆ ನೆರೆಯನ್ನು ತಡೆದು ಶಾಶ್ವತ ಪರಿಹಾರ ನೀಡಬೇಕು. ಈ ಸರಕಾರದಿಂದ ಅದು ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಬೆಂಗಳೂರು ಪರಿಸ್ಥಿತಿ ನೋಡಿ:
ಬೆಂಗಳೂರು ನಗರದ ಪರಿಸ್ಥಿತಿ ಏನಾಗಿದೆ ಎಂದು ನೀವೇ ನೋಡುತ್ತಿದ್ದೀರಿ. ಬೆಂಗಳೂರು ಉಸ್ತುವಾರಿ ಸಚಿವರು ಭಾರೀ ಬಿಜಿ ಇದ್ದರು, ಹಾಗಾಗಿ ಅವರನ್ನು ಬಿಟ್ಟೇ ಸಿಎಂ ನಗರ ಪ್ರದಕ್ಷಿಣೆ ಮಾಡಿದರು. ಸಿಎಂ ಅವರು ಮುಚ್ಚಿದ ಗುಂಡಿ ನೋಡ್ಕೊಂಡು ಹೋಗುತ್ತಿದ್ದರೆ ಅವರ ಹಿಂದೆ ಹಾಕಿರುವ ಟಾರು ಕಿತ್ತುಕೊಂಡು ಹೋಗಿದೆ. ಗ್ಯಾರಂಟಿ ಸ್ಕೀಮ್ ಮಾಡಿ ಖಜಾನೆ ಖಾಲಿ ಅಂಥ ನಾನು ಹೇಳಲ್ಲ. ಜನರೂ ಕೇಳಿರಲಿಲ್ಲ. ಆದರೆ ದಸರಾ ಹೆಸರಲ್ಲಿ ಈಗ ಬಸ್ ಟಿಕೆಟ್ ಬೆಲೆ ಹೆಚ್ಚಳ ಮಾಡಿದೆ ಸರಕಾರ. ಖಾಸಗಿ ಬಸ್ಸುಗಳ ಜತೆ ಕೆಎಸ್ಆರ್ಟಿಸಿ ಕೂಡ ದರ ಏರಿಕೆಗೆ ಪೈಪೋಟಿಗೆ ಬಿದ್ದಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.
ರೈತರಿಗೆ ಈ ಸರಕಾರ ಏನನ್ನೂ ಒಳ್ಳೆಯದು ಮಾಡಿಲ್ಲ. ಅವರಿಗೆ ಸಕಾಲಕ್ಕೆ ಅಗತ್ಯ ಸಾಲ ಸಿಗುತ್ತಿಲ್ಲ. ನಾನು ಸಿಎಂ ಆಗಿದ್ದಾಗ ೩೫% ಸಾಲ ನೀಡುತ್ತಿದ್ದೆ. ಈಗ ಇವರು ಗ್ಯಾರಂಟಿ ಕೊಟ್ಟವರು! ಎಷ್ಟು ಪರ್ಸೆಂಟ್ ಸಾಲ ಕೊಟ್ಟಿದ್ದೀರಿ, ಹೇಳಿ? ಎಂದು ಸಿಎಂಗೆ ಪ್ರಶ್ನೆ ಹಾಕಿದ ಕೇಂದ್ರ ಸಚಿವರು; ಇವರು ನೀಡುತ್ತಿರುವ ಸಾಲದ ಪ್ರಮಾಣ ಕೇವಲ 13% ಗೆ ಕುಸಿದಿದೆ. ಇದು ಈ ಸರಕಾರದ ರೈತಪರ ಕಾಳಜಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ದಲ್ಲಿ ಉತ್ತಮ ಮಳೆಯಾಗಿದೆ. ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ಇದರಿಂದ ರೈತರು ಖುಷಿಯಾಗಿದ್ದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಡೆ ಮಳೆ ಹೆಚ್ಚಿ ಪ್ರವಾಹದ ಸ್ವರೂಪ ಪಡೆಯಿತು. ಗೌರಿ ಗನೇಶ ಹಬ್ಬದ ವೇಳೆಯಲ್ಲೇ ಕಲ್ಯಾಣ ಕರ್ನಾಟಕ, ಬೆಳಗಾವಿ ಭಾಗದಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಈಗಲೂ ಸಹ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ದೊಡ್ಡ ಪ್ರವಾಹ ಉಂಟಾಗಿದೆ. ನಾನು ಆ ಜಿಲ್ಲೆಗಳ ಡಿಸಿಗಳ ಜೊತೆ ದೂರವಾಣಿಯಲ್ಲಿ ಮಾತಾಡಿ ಮಾಹಿತಿ ಪಡೆದಿದ್ದೇನೆ. ಪ್ರತಿ ಒಂದು ಜಿಲ್ಲೆಯಲ್ಲೂ ಒಂದು ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಮನೆಗಳಿಗೆ ನೀರು ನುಗ್ಗಿ ಜನರು ಬೀದಿಪಾಲಾಗಿದ್ದಾರೆ. ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಇಷ್ಟೂ ಜಿಲ್ಲೆಗಳ 12 ಗೋಶಾಲೆಗಳು ಸಂಪೂರ್ಣ ಮುಳುಗಿವೆ. ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ ಎಂದು ಅವರು ಹೇಳಿದರು.
ನೆರೆಯ ಮಹಾರಾಷ್ಟ್ರದಿಂದ ನಿತ್ಯವೂ 4.5 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ ಬರುತ್ತಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಭೀಮಾ, ಕೃಷ್ಣಾ ನದಿ ಪಾತ್ರಗಳಲ್ಲಿಯೂ ಅತಿವೃಷ್ಠಿಯಾಗಿ ಅಷ್ಟೇ ಪ್ರಮಾಣದ ನೀರು ಹರಿಯುತ್ತಿದೆ. ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದ ನೀರು ಪ್ರವಾಹ ಸ್ವರೂಪ ಪಡೆದು ಅಪಾರ ನಷ್ಟ ಉಂಟು ಮಾಡಿದೆ ಎಂದು ಅವರು ಹೇಳಿದರು.
ನೆರೆಪೀಡಿತ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ಅನಾಹುತ ಆಗಿದೆ. ಹಳ್ಳಿಗಳಿಗೆ ಹಳ್ಳಿಗಳು ಜಲಾವೃತವಾಗಿವೆ. ಇಷ್ಟು ದಿನದಿಂದ ಜನರು ನೊಂದಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ಇದೇ ಸಮಸ್ಯೆ. ಈ ಬಾರಿ ಇಷ್ಟೊಂದು ಮಟ್ಟಿಗೆ ಪ್ರಳಯ ಸದೃಶ ನೆರೆ ಬಂದರೂ ಯಾವೊಬ್ಬ ಮಂತ್ರಿಯೂ ಭೇಟಿ ಕೊಟ್ಟಿಲ್ಲ. ಚಿಕ್ಕಮಗಳೂರು ಭಾಗದಲ್ಲಿ ಮಳೆ ಬಂದು ವಿಧ್ವಂಸ ಸೃಷ್ಟಿಯಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ, ಮನೆಗಳು ಹಾನಿಯಾಗಿವೆ. ಇಷ್ಟೆಲ್ಲಾ ಆಗಿದ್ದರೂ ಈವರೆಗೂ ಸರಕಾರ ಜನರ ನೆರವಿಗೆ ಬಂದಿಲ್ಲ ಎಂದು ಅವರು ದೂರಿದರು.
ಖರ್ಗೆ ಕುಟುಂಬಕ್ಕೆ ಮೊದಲು ಪರಿಹಾರ ಕೊಡಿ; ರೈತರ ಸಂಕಷ್ಟಕ್ಕೂ ಸ್ಪಂದಿಸಿ- ವಿಜಯೇಂದ್ರ
ಮೊದಲು ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಕ್ಕೆ ಪರಿಹಾರ ಕೊಡಿ. ಜೊತೆಗೇ ರೈತರ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (B.Y. Vijayendra) ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೈತರೊಬ್ಬರು ಬೆಳೆ ನಾಶವಾಗಿದೆ. ತೊಗರಿ ಬೆಳೆ ನಾಶವಾಗಿದೆ. 4 ಎಕರೆಗೆ ಪರಿಹಾರ ಕೊಡಿಸಿ ಎಂದು ಕೇಳಿದರೆ, ನನ್ನದೇ 40 ಎಕರೆ ಇದೆ; ನನ್ನ ಬೆಳೆಯೂ ಸಂಪೂರ್ಣ ನಾಶವಾಗಿದೆ. ಪರಿಹಾರ ಬಂದಿಲ್ಲ ಎಂಬ ಮಾತು ಮಲ್ಲಿಕಾರ್ಜುನ ಖರ್ಗೆಯವರದು ಎಂದು ಆಕ್ಷೇಪಿಸಿದರು.
ಒಣಭೂಮಿಗೆ ಎನ್ಡಿಆರ್ಎಫ್ ನಿಯಮದಡಿ ಹೆಕ್ಟೇರ್ಗೆ 6 ಸಾವಿರ ರೂ. ಪರಿಹಾರ ಇತ್ತು. ಆದರೆ, ಮುಖ್ಯಮಂತ್ರಿಗಳಾಗಿದ್ದ ರೈತನಾಯಕ ಯಡಿಯೂರಪ್ಪ ಅವರು ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹಪೀಡಿತರಿಗೆ ರಾಜ್ಯದಿಂದ ಎನ್ಡಿಆರ್ಎಫ್ ಮಾದರಿಯ ನೆರವು ನೀಡಿದ್ದರು.
ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪ ಮಾಡುತ್ತಿಲ್ಲ; ಆ ಕಾಳಜಿ ವ್ಯಕ್ತವಾಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರ ಬಗ್ಗೆ ಈಗ ನೀವು ಕಾಳಜಿ ತೋರಿಸದೇ ಇದ್ದರೆ ಇನ್ಯಾವಾಗ ಕಾಳಜಿ ತೋರಿಸುತ್ತೀರಿ ಎಂದು ಪ್ರಶ್ನಿಸಿದರು. ಎಕರೆಗೆ 25ರಿಂದ 30 ಸಾವಿರ ರೂ. ಪರಿಹಾರ ಕೊಡಬೇಕೆಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ
ಜಾತಿ ಸಮೀಕ್ಷೆ ಕುರಿತು ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಮುಖ್ಯಮಂತ್ರಿಗಳು ನಿನ್ನೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರ ಸರಕಾರದ ಜಾತಿ ಸಮೀಕ್ಷೆಯನ್ನೂ ವಿರೋಧಿಸುತ್ತೀರಾ ಎಂದು ಕೇಳಿದ್ದಾರೆ. ಕಾಂತರಾಜು ವರದಿಗೆ 180 ಕೋಟಿ ಖರ್ಚು ಮಾಡಿದ್ದೀರಲ್ಲವೇ? ನೀವೇ ಮುಖ್ಯಮಂತ್ರಿ ಇದ್ದರೂ ಅದನ್ನು ಅನುಷ್ಠಾನ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು.
ಇವತ್ತು 500- 600 ಕೋಟಿ ಖರ್ಚು ಮಾಡಿ ಸಮೀಕ್ಷೆ ಮಾಡುವುದನ್ನು ಬಿಜೆಪಿ ವಿರೋಧಿಸಲು ಹೊರಟಿಲ್ಲ. ಸ್ವಾತಂತ್ರ್ಯಾನಂತರದಲ್ಲಿ ಹಿಂದಿನ ಕಾಂಗ್ರೆಸ್, ಯುಪಿಎ ಸರಕಾರವು ಜಾತಿ ಗಣತಿ ಕುರಿತು ಇಂಥ ದಿಟ್ಟ ನಿರ್ಧಾರ ಮಾಡಿರಲಿಲ್ಲ. ಮನಮೋಹನ್ ಸಿಂಗ್ ಅವರ ಸರಕಾರ ತೀರ್ಮಾನ ಮಾಡಿದರೂ ರಾಹುಲ್ ಗಾಂದಿಯವರು ಅದನ್ನು ವಿರೋಧಿಸಿದ್ದರು ಎಂದು ಗಮನ ಸೆಳೆದರು.
ರಾಜ್ಯ ಸರಕಾರವು ಜಾತಿ ಜನಗಣತಿ ನೆಪದಲ್ಲಿ ಪಗಡೆಯಾಟ ಮಾಡಲು ಹೊರಟಿದೆ. ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ. ರಾಜ್ಯ ಸರಕಾರಕ್ಕೆ ಅಧಿಕಾರ ಇದೆಯೋ ಇಲ್ಲವೋ; ನಾವು ಜಾತಿ ಜನಗಣತಿಯನ್ನು ವಿರೋಧಿಸುತ್ತಿಲ್ಲ. ಸಿಎಂ ಇಚ್ಛಾಶಕ್ತಿ ಬಗ್ಗೆ ಗೊಂದಲ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಮಾಡಲು ಹೊರಟಿದ್ದಾರಾ ಅಥವಾ ಪ್ರಾಮಾಣಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಲೆಂದು ಇದನ್ನು ಮಾಡುತ್ತಿದ್ದಾರಾ? ಅವರಲ್ಲಿ ಪ್ರಾಮಾಣಿಕ ಕಳಕಳಿ ಕಾಣುತ್ತಿಲ್ಲ; ಜನರಲ್ಲೂ ಅನುಮಾನ ಹುಟ್ಟುಹಾಕಿದ್ದಾರೆ ಎಂದು ಆಕ್ಷೇಪಿಸಿದರು.
ಪ್ರಶ್ನೆಗೆ ಉತ್ತರ ನೀಡಿದ ಅವರು, ಶೋಷಿತ- ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ನ್ಯಾಯ ಕೊಡಬೇಕೆಂಬ ಬದ್ಧತೆ ಬಿಜೆಪಿಗೆ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಅಲ್ಲ ಎಂದು ತಿಳಸಿದರು. ಸಿದ್ದರಾಮಯ್ಯನವರ ಮನಸ್ಥಿತಿಗೆ ನಮ್ಮ ವಿರೋಧ ಇದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಹೈಕೋರ್ಟ್ ಏನು ಆದೇಶ ಮಾಡಿದೆ? ಯಾಕೆ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಇಟ್ಟುಕೊಂಡಿದ್ದಾರೆ? 60ಕ್ಕೂ ಹೆಚ್ಚು ಪ್ರಶ್ನೆಗಳಿದ್ದು, ಇದರಲ್ಲಿ ಎಲ್ಲವೂ ಕಡ್ಡಾಯವಲ್ಲ ಎಂದು ರಾಜ್ಯ ಹೈಕೋರ್ಟ್ ತಿಳಿಸಿದೆ ಎಂದು ಗಮನ ಸೆಳೆದರು.