ಬೆಂಗಳೂರು ಉತ್ತರ ಜಿಲ್ಲೆ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ನಿರ್ಲಕ್ಷ್ಯ ತೋರಿದ ಆರೋಪದಡಿ ಮಾದನಾಯಕನಹಳ್ಳಿ ಶಾಲೆಯ ಮುಖ್ಯಶಿಕ್ಷಕಿ (Headmistress) ಸೌಭಾಗ್ಯ ಅವರನ್ನು ಅಮಾನತು (Suspended) ಮಾಡಲಾಗಿದೆ.
ಮಾಹಿತಿಯನ್ನು ನೀಡುವ ಬಗ್ಗೆ ಆಯೋಗ ಒತ್ತಾಯ ಮಾಡುತ್ತಿಲ್ಲ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಹಾಗೂ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 2025 ನೇ ಸೆಪ್ಟೆಂಬರ್ 22 ರಿಂದ ಪ್ರಾರಂಭಿಸಿದ್ದು ಪ್ರಗತಿಯಲ್ಲಿದೆ.
ಈ ಸಮೀಕ್ಷೆಯಲ್ಲಿ ರಾಜ್ಯದ ಸಂಪೂರ್ಣ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ, ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ/ಕುಟುಂಬಗಳ ಸ್ವಯಂ ಇಚ್ಛೆಗೆ ಬಿಡಲಾಗಿದೆಯೆಂದೂ ಹಾಗೂ ಮಾಹಿತಿಯನ್ನು ನೀಡುವ ಬಗ್ಗೆ ಆಯೋಗ ಒತ್ತಾಯ ಮಾಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್.ನಾಯ್ಕ್ ಅವರು ತಿಳಿಸಿದ್ದಾರೆ.
2025ನೇ ಸೆಪ್ಟೆಂಬರ್ 28 ರಂದು ಕೆಲವು ಜನಪ್ರತಿನಿಧಿಗಳು, ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸುತ್ತಾ, ತಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲವೆಂದು ಹಾಗೂ ಸಾರ್ವಜನಿಕರೂ ಸಹ ಭಾಗವಹಿಸಬಾರದೆಂದು ಹೇಳಿಕೆಗಳನ್ನು ನೀಡಿರುವುದು ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ರೀತಿಯ ಹೇಳಿಕೆಗಳ ಮೂಲಕ ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸದಂತೆ ಪ್ರೇರೇಪಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಈ ರೀತಿಯ ಹೇಳಿಕೆಗಳು ನ್ಯಾಯಾಲಯದ ಆದೇಶದ ಆಶಯಗಳಿಗೆ ವಿರುದ್ಧವಾಗಿವೆ (Against the spirit).
ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ಮತ್ತು ಅವರ ಕಲ್ಯಾಣ ಹಾಗೂ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು, ಶಾಸನಬದ್ಧ ನಿಯಮಾವಳಿಗಳನ್ನಯ ಸದರಿ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
ಆದರೆ, ಸಾರ್ವಜನಿಕ ಹೇಳಿಕೆಗಳು ಸಮೀಕ್ಷೆಯಲ್ಲಿ ಜನರು ಭಾಗವಹಿಸದಂತೆ ಪ್ರಚೋದಿಸುತ್ತಿದ್ದು, ಸಾರ್ವಜನಿಕ ಹಿತಕ್ಕಾಗಿ ಕೈಗೊಳ್ಳಲಾದ ಸಮೀಕ್ಷೆಯ ಉದ್ದೇಶಕ್ಕೆ ವಿರುದ್ಧವಾಗಿವೆ. ನಾಗರಿಕರು ಯಾವುದೇ ಬಲವಂತವಿಲ್ಲದೆ ಸ್ವಇಚ್ಛೆಯಿಂದ ಸಮೀಕ್ಷೆಯಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲಿ, ಅವರ ಭಾಗವಹಿಸುವಿಕೆಯನ್ನು ತಡೆಯುವ ಇಂತಹ ಹೇಳಿಕೆಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿರುತ್ತದೆ.
ಈ ರೀತಿಯ ಹೇಳಿಕೆಗಳಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ತಲುಪುವ ಸಾಧ್ಯತೆ ಇರುವ ಕಾರಣ ಹಾಗೂ ಇದು ಮಾನ್ಯ ನ್ಯಾಯಾಲಯದ ಆದೇಶದ ಆಶಯಕ್ಕೆ ವ್ಯತಿರಿಕ್ತವಾಗಿರುವುದರಿಂದ (Against the spirit) ಈ ರೀತಿಯ ಹೇಳಿಕೆಗಳನ್ನು ನೀಡದಿರುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್.ನಾಯ್ಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವದಂತಿಗಳಿಗೆ ಕಿವಿ ಕೊಡಬೇಡಿ
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಲಾಗುತ್ತಿದ್ದು, ಕೆಲವು ಸಾರ್ವಜನಿಕರು ಗಣತಿದಾರರು ತಮ್ಮ ಪಡಿತರ ಚೀಟಿಯ ರದ್ದತಿಗೆ ಬಂದಿದ್ದಾರೆಂಬ ತಪ್ಪು ಕಲ್ಪನೆಯಿಂದ ಸರಿಯಾದ ಮಾಹಿತಿ ನೀಡಲು ಸಹಕರಿಸದೆ ಸಮೀಕ್ಷೆಗೆ ಅಡ್ಡಿಯಾಗುತ್ತಿರುವುದು ಕಂಡುಬಂದಿರುತ್ತದೆ.
ಈ ಸಮೀಕ್ಷೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಹಿಂದುಳಿದ ವರ್ಗಗಳ ಹಾಗೂ ಇತರೆ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶವನ್ನು ಸಂಗ್ರಹಿಸಲು ಮಾತ್ರ ನಡೆಸಲಾಗುತ್ತಿದೆ.
ಯಾವುದೇ ಪಡಿತರ ಚೀಟಿ ರದ್ದತಿ ಕಾರ್ಯವನ್ನು ಸಮೀಕ್ಷೆಯಲ್ಲಿ ಮಾಡಲಾಗುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಯೋಜನೆಗಳನ್ನು ರೂಪಿಸಲು ಈ ದತ್ತಾಂಶ ಸಹಕಾರಿಯಾಗಲಿದೆ.
ಹಾಗಾಗಿ ಸಾರ್ವಜನಿಕರು ಈ ಸಮೀಕ್ಷೆ ಬಗ್ಗೆ ಯಾವುದೇ ತಪ್ಪು ಕಲ್ಪನೆ ಹೊಂದದೆ ಮತ್ತು ವದಂತಿಗಳಿಗೆ ಕಿವಿಕೊಡದೇ ನಿಶ್ಚಿಂತೆಯಿಂದ ಭಾಗವಹಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.