ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹರಿಯುವ ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲು ಸಹೋದರ ಭಾವನೆಯಿಂದ ಪ್ರಯತ್ನ ಮಾಡುವುದಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan) ಭರವಸೆ ನೀಡಿದರು.
ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ಜನಸೇನಾ ಪಕ್ಷಕ್ಕೆ ಬಲ ತುಂಬಿದವರು. ಅವರಿಂದಲೇ ನಾನು ರಾಜಕೀಯಕ್ಕೆ ಬಂದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬೆಂಗಳೂರು ನಗರಕ್ಕೆ ಆಹಾರ ಕೊಡುವ ಅಕ್ಷಯ ಪಾತ್ರೆಗಳು. ಹೀಗಾಗಿ ನೀರಾವರಿ ಯೋಜನೆ ಬಗ್ಗೆ ನನ್ನ ಪ್ರಯತ್ನ ಮಾಡ್ತೇನೆ. ಆಂಧ್ರ ಪ್ರದೇಶಕ್ಕೆ ಕರ್ನಾಟಕದ ಮೇಲೆ ತುಂಬಾ ಪ್ರೀತಿ ಇದೆ. ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿ, ಮೂರು ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸಲು ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಮತ್ತು ನ್ಯಾ. ವಿ. ಗೋಪಾಲಗೌಡ ಮನವಿ ಮಾಡಿದರು. ಆಗ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಪವನ್ ಕಲ್ಯಾಣ್ ಭರವಸೆ ನೀಡಿದರು.
ಸಮಾವೇಶದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ಪವನ್ ಕಲ್ಯಾಣ್ ಸನಾತನ ಧರ್ಮವನ್ನ ಕಾಪಾಡ್ತಿದ್ದಾರೆ. ಅವರು ಭವಿಷ್ಯದ ನಾಯಕ ಎಂದರು.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲ ಗೌಡ ಮಾತನಾಡಿ, ನೆರೆದ ಜನತೆಯನ್ನುದ್ದೇಶಿಸಿ, ನೀವು ಪವನ್ ಕಲ್ಯಾಣ್ ಅವರಿಗಾಗಿ ಬಂದಿದ್ದೀರಾ, ಆದ್ದರಿಂದ ನಾನು ತುಂಬಾ ಮಾತನಾಡಲು ಹೋಗುವುದಿಲ್ಲ.
ನನಗೆ ಆತ್ಮೀಯ ಸ್ನೇಹಿತ, ದೇಶದಲ್ಲಿ ಪ್ರಖ್ಯಾತಿ ಪಡೆದುಕೊಂಡ ಪವನ್ ಕಲ್ಯಾಣ್ ಬಂದಿದ್ದಾರೆ. ಅವರಿಗೆ ಆರೋಗ್ಯ ಸರಿಯಿಲ್ಲಾದಿದ್ದರೂ, ನಿಮಗಾಗಿ, ನನಗಾಗಿ ಹೈದರಾಬಾದ್ ನಿಂದ ಬಂದಿದ್ದಾರೆ.
ಪವನ್ ಕಲ್ಯಾಣ್ ಅವರಿಗೆ 10 ದಿನಗಳಿಂದ ಆರೋಗ್ಯ ಸರಿಯಿರಲಿಲ್ಲ. ಯುವ ಜನತೆ,ರೈತರು, ಮಹಿಳೆಯ ಪರ ಆಲೋಚನೆ ಮಾಡುವಂತಹ ನಾಯಕ ಪವನ್ ಕಲ್ಯಾಣ್, ಇಂದು ಆಂಧ್ರದಲ್ಲಿ ಗ್ರಾಮೀಣ, ಅರಣ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ನಟನೆಯಲ್ಲಿ ಅಪ್ರತಿಮ ಸರಸ್ವತಿ ಪುತ್ರರು. ಪ್ರಜೆಗಳಿಗಾಗಿ, ದಲಿತರಿಗಾಗಿ, ಮಹಿಳೆಯರಿಗಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಆಂತಕ ಇದೆ. ಸಿಎಂ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ಮೋದಿಗೆ ಮನವಿ ಮಾಡಿ ಕೃಷ್ಣಾನದಿಯಿಂದ ನಮ್ಮ ಜನರಿಗೆ ಕುಡಿಯುವ ನೀರು ತರಿಸಬೇಕು. ನಮಗೆ ಅವರು ನೀರು ಕೊಡಿಸುತ್ತಾರೆ. ಅದರಲ್ಲಿ ಯಾವುದೇ ಸಂದೇಹ ಇಲ್ಲ. ನಾನು ನಿವೃತ್ತನಾದರೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.