ಹಾಸನ: ವರ್ಷಕ್ಕೊಮ್ಮೆಯಷ್ಟೇ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ನಗರದ ಅಧಿದೇವತೆ ಹಾಸನಾಂಬೆಯ (Hassanambe) ದರ್ಶನೋತ್ಸವ ಇಂದಿನಿಂದ ಚಾಲನೆ ಪಡೆಯಲಿದೆ.
ಆಶ್ವೀಕ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆ ನಂತರ ಧಾರ್ಮಿಕ ವಿಧಿ ವಿಧಾನಗ ಬಾಗಿಲು ತೆರೆಯಲಿದೆ.
ಮೊದಲ ಮತ್ತು ಕಡೆಯ ದಿನ ದರ್ಶನ ಇರುವುದಿಲ್ಲ. ಅ.9 ರಿಂದ 23 ರ ವರೆಗೆ ಜಾತ್ರೋತ್ಸವ ಜರುಗಲಿದೆ.
VIP ಸಂಸ್ಕೃತಿಗೆ ಬ್ರೇಕ್
ನಾಡಿನ ಪ್ರಸಿದ್ಧ ಹಾಸನಾಂಭ ಉತ್ಸವದಲ್ಲಿ ಪ್ರಸ್ತುತ ವರ್ಷದಿಂದ ವಿಐಪಿ ಸಂಪ್ರದಾಯಕ್ಕೆ ಬ್ರೇಕ್ ನೀಡಿ ಜನಸ್ನೇಹಿ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಹಾಸನಾಂಭ ಉತ್ಸವದಲ್ಲಿ ವಿಐಪಿ ಸಂಸ್ಕೃತಿಯಿಂದ ಸ್ಥಳೀಯರು ಬೇಸತ್ತಿದ್ದು, ಈ ವರ್ಷದಿಂದ ಇದಕ್ಕೆ ಸಾಂಸ್ಕೃತಿಕ ತಿಲಾಂಜಲಿ ಹಾಡಲಾಗುವುದು. ಅಲ್ಲದೆ, ಜನಸ್ನೇಹಿ ಹಾಸನಾಂಭ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಳೆದ ವರ್ಷ ಹಾಸನದಲ್ಲಿ ವಿಐಪಿಗಳ ಎಸ್ ಕಾರ್ಟ್ಗಳದ್ದೇ ಸದ್ದು ಹೆಚ್ಚಾಗಿತ್ತು. ಆದರೆ, ಈ ವರ್ಷ ಇದಕ್ಕೆ ಅವಕಾಶ ನೀಡಲಾಗುವುದಿಲ್ಲ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ವ್ಯವಸ್ಥೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕರು, ಸಚಿವರು, ನ್ಯಾಯಾಧೀಶರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿದಂತೆ ಉಳಿದ ಗಣ್ಯ ವ್ಯಕ್ತಿಗಳು ತಾವು ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಇ-ಮೇಲ್ ಅಥವಾ ಫೋನ್ ಕರೆಗಳ ಮೂಲಕ ಮೊದಲೇ ತಿಳಿಸಬೇಕು.
ಮಾಹಿತಿ ನೀಡುವ ಗಣ್ಯವ್ಯಕ್ತಿಗಳನ್ನು ಜಿಲ್ಲಾಡಳಿತ ಏರ್ಪಡಿಸಿರುವ ವಾಹನದಲ್ಲಿ ದೇವಾಲಯಕ್ಕೆ ಕರೆತಂದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.