ಕೊಲ್ಕತ್ತಾ: ಇತ್ತೀಚೆಗೆ ಕಾಲ್ತುಳಿತ (Stampede) ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವು- ನೋವಿಗೆ ಕಾರಣವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಕರೂರ್‌ನಲ್ಲಿ ನಟ ವಿಜಯ್ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ಮಕ್ಕಳು ಸೇರಿ 38 ಮಂದಿ ಸಾವುನಪ್ಪಿರುವ ಬೆನ್ನಲ್ಲೇ ನಿನ್ನೆ ಪಶ್ಚಿಮ ಬಂಗಾಳದ ಬರ್ಧಮನ್ ರೈಲು ನಿಲ್ದಾಣದಲ್ಲಿ (Bardhaman Railway Station) ಕಾಲ್ತುಳಿತ ಸಂಭವಿಸಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬರ್ಧಮನ್ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ಮಹಿಳೆಯೊಬ್ಬರು ಪಾದಚಾರಿ ಮೇಲ್ವೇತುವೆಯ ಮೇಲೆ ನಿಯಂತ್ರಣ ಕಳೆದುಕೊಂಡು ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೌರಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿಶಾಲ್ ಕಪೂರ್ ಮಾತನಾಡಿ, ಈ ಘಟನೆ ಸಂಜೆ 5:30 ರ ಸುಮಾರಿಗೆ ಪ್ಲಾಟ್‌ಫಾರ್ಮ್ 4 ಮತ್ತು 5 ರ ನಡುವೆ ಸಂಭವಿಸಿದೆ. ಗಾಯಗೊಂಡವರಲ್ಲಿ ಐದು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ. ಅವರೆಲ್ಲರನ್ನೂ ಚಿಕಿತ್ಸೆಗಾಗಿ ಬರ್ಧಮನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.
BREAKING: Stampede at Bardhaman railway station in West Bengal amid massive rush of passengers, many injured pic.twitter.com/mr521AHvmD
— Vani Mehrotra (@vani_mehrotra) October 12, 2025
8 ಮಂದಿ ಗಂಭೀರ
4 ಮತ್ತು 5 ನೇ ಪ್ಲಾಟ್‌ಫಾರ್ಮ್ನಗಳ ನಡುವಿನ ಮೆಟ್ಟಿಲುಗಳ ಕೆಳಗೆ ಬರುವಾಗ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬೀಳುತ್ತಿದ್ದಂತೆ, ಪಾದಚಾರಿ ಮೇಲ್ವೇತುವೆಯ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಇತರ ಹಲವರು ಸಹ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು ಕಾಲ್ತುಳಿತ ಸಂಭವಿಸಿ ಅನೇಕರಿಗೆ ಗಾಯಗಳಾಗಿವೆ.
ಕೂಡಲೇ ರೈಲ್ವೆ ರಕ್ಷಣಾ ಪಡೆ ಮತ್ತು ನಿಲ್ದಾಣದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು ಎಂದು ಭಾರತೀಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಸ್ಥಳದಲ್ಲಿ ಯಾವುದೇ ರೀತಿಯಲ್ಲಿ ಕಾಲ್ತುಳಿತ ಸಂಭವಿಸಿಲ್ಲ. ಮತ್ತು ಜನಸಂದಣಿ ಸಾಮಾನ್ಯವಾಗಿತ್ತು ಎಂದು ಸ್ಪಷ್ಟಪಡಿಸಿದೆ. ಇದಲ್ಲದೆ, ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಪಾದಚಾರಿ ಮೇಲ್ವೇತುವೆಯಿಂದ ಭಾರೀ ಜನರ ಗುಂಪು ಕೆಳಗೆ ಇಳಿಯಲು ಪ್ರಯತ್ನಿಸುತ್ತಿರುವುದು ಕಾಣಿಸಿಕೊಂಡಿದೆ. ಜನಸಂದಣಿ ಹೆಚ್ಚಿದ್ದರಿಂದ ಸ್ಥಳದಲ್ಲಿ ನೂಕಾಟ ತಳ್ಳಾಟ ಉಂಟಾಗಿರುವುದು ಕಾಣಿಸಿಕೊಂಡಿದೆ.
ಬಹುತೇಕ ಕಾಲ್ತುಳಿತ ಪರಿಸ್ಥಿತಿ ಸಂಭವಿಸಿದೆ. ಆದರೆ ಕಾಲ್ತುಳಿತ ಸಂಭವಿಸಿಲ್ಲ ಎಂದು ಇಲಾಖೆ ಹೇಳುತ್ತಿದೆ.