ಬೆಂಗಳೂರು: ಮುಂಗಾರು ಮಾರುತಗಳ ನಿರ್ಗಮನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕವನ್ನೂ ಒಳಗೊಂಡಂತೆ ಅಕ್ಟೋಬರ್ 19ರ ವರೆಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಅವಧಿಯಲ್ಲಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗಲಿದೆ. ಗಾಳಿಯ ವೇಗವು ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಬೀಸಲಿದೆ. ಈ ಅವಧಿಯಲ್ಲಿ ಸಿಡಿಲು ಉಂಟಾಗುವ ಸಾಧ್ಯತೆಗಳೂ ಇವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಅಕ್ಟೋಬರ್ 19ರ ವರೆಗೆ ಕರ್ನಾಟಕದ ದಕ್ಷಿಣ ಒಳನಾಡು, ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ ಮತ್ತು ರಾಯಲಸೀಮ, ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ತಮಿಳುನಾಡು, ಕೇರಳ ಮತ್ತು ಮಾಹೆ, ಭಾಗಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ 5 ದಿನಗಳವರೆಗೆ ಈ ಪ್ರದೇಶದಲ್ಲಿ ಮಿಂಚು ಮತ್ತು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ದೊಡ್ಡಬಳ್ಳಾಪುರ: ಭಾರೀ ಮಳೆ.. ಸಿಡಿಲು ಬಡಿದು ಮನೆಗೆ ಹಾನಿ..!
ಮಂಗಳವಾರ ರಾತ್ರಿ ನಗರ ವ್ಯಾಪ್ತಿಯ ಸುರಿದ ಗುಡುಗು, ಮಿಂಚು ಸಹಿತ ಭಾರಿ ಮಳೆಯ ವೇಳೆ ಸಿಡಿಲು (Thunderbolt) ಬಡಿದು ನೂತನವಾಗಿ ನಿರ್ಮಿಸಿದ್ದ ಮನೆಯೊಂದು ಹಾನಿಯಾಗಿರುವ ಘಟನೆ ನಗರದ ದರ್ಗಾಜೋಗಿಹಳ್ಳಿಯಲ್ಲಿ ಸಂಭವಿಸಿದೆ.
ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಮುಜಾಹಿದ್ ಖಾನ್ ಅವರು ಎರಡು ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ಮನೆಗೆ ಮಂಗಳವಾರ ರಾತ್ರಿ 9.10 ರ ಸುಮಾರಿಗೆ ಸಿಡಿಲು ಬಡಿದೆ.
ಸಿಡಿಲು ಬಡಿದ ಕಾರಣ ಮನೆಯ ಮೇಲಿನ ಗೋಡೆಯ ಕಟ್ಟೆ ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಮಕ್ಕಳು ಸೇರಿದಂತೆ ಯಾರಿಗೂ ತೊಂದರೆ ಉಂಟಾಗಿಲ್ಲ.
ದೊಡ್ಡಬಳ್ಳಾಪುರ ಗ್ರಾಮಾಂತರ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.