ದೊಡ್ಡಬಳ್ಳಾಪುರ: ಬಡವರಿಗೆ ಅತ್ಯಗತ್ಯವಾಗಿರುವ ಬಿಪಿಎಲ್ (BPL) ಕಾರ್ಡ್ ಅನ್ನು ರದ್ದುಗೊಳಿಸುವ ಹುನ್ನಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ಬಣದಿಂದ ಇಂದು ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ನಗರ ಅಧ್ಯಕ್ಷ ಶ್ರೀನಗರ ಬಶೀರ್, ರಾಜ್ಯ ಸರ್ಕಾರ ಮತ್ತು ಆಹಾರ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 2873 ಅಂತ್ಯೋದಯ, 4470 ಎಪಿಲ್ ಕಾರ್ಡ್‌ಗಳು, 66120 ಬಿಪಿಎಲ್ ಕಾರ್ಡ್ ಇವೆ. ಆದರೆ ಏಕಾಏಕಿ ಅವೈಜ್ಞಾನಿಕವಾಗಿ ಮಾನದಂಡ ರೂಪಿಸಿ 5700 ಮಂದಿಗೆ ನೋಟಿಸ್ ನೀಡುವ ಮೂಲಕ ಪಡಿತರ ಚೀಟಿಯನ್ನು ರದ್ದು ಮಾಡುವ ಹುನ್ನಾರಕ್ಕೆ ಇಲಾಖೆ ಮುಂದಾಗಿದೆ.
ಪಡಿತರ ಚೀಟಿಗಳನ್ನು ಅನರ್ಹಗೊಳಿಸಲು ಗ್ರಾಹಕರಿಗೆ ನೋಟಿಸ್ ನೀಡುವ ಬರದಲ್ಲಿ ಕೆಲವು ಮಾನದಂಡಗಳನ್ನು ತಯಾರಿಮಾಡಿದ್ದು, ಅವು ಬಡವರ ವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದೆ.
ಬಡವರು ಕೆರಳಿ ರಸ್ತೆಗಿಳಿಯುವ ಮುನ್ನ ಎಚ್ಚೆತ್ತುಕೊಳ್ಳಿ
ಇಲಾಖೆ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿ, ಎಪಿಎಲ್ ಮಾಡುವ ಉದ್ದೇಶ ಹೊಂದಿದ್ದು, ವಾರ್ಷಿಕ ಆದಾಯ ರೂ-1,20,000/-ಗಳು, 125ಸಿಸಿ ಬೈಕ್‌ಗಳು, ಸಾವಿರ ಚದರ ಅಡಿ ಮನೆ ಇರುವ ಬಡವರಿಗೆ ನೋಟೀಸ್ ನೀಡುತ್ತಿರುವುದು ಖಂಡನೀಯ.
ಕೇವಲ 500 ರೂಗಳಿಗೆ ದಿನ ಕೂಲಿ ಮಾಡುವ ಬಡವನಿಗೆ ಒಟ್ಟುಗೂಡಿಸಿದರೆ ವಾರ್ಷಿಕ 1 ಲಕ್ಷ 80 ಸಾವಿರ ರೂ ದೊರೆಯುತ್ತದೆ. ಆದರೆ ಇಲಾಖೆ ವಾರ್ಷಿಕ 1 ಲಕ್ಷ 20 ಸಾವಿರಕ್ಕೆ ಮಾತ್ರ ಬಿಪಿಎಲ್ ಕಾರ್ಡ್ ಎಂದು ರದ್ದು ಮಾಡಲು ಮುಂದಾಗಿದೆ.
ಸಣ್ಣಪುಟ್ಟ ಅಂಗಡಿಯವರು ಸರ್ಕಾರದ ನಿಯಮಾನುಸಾರ ಆದಾಯ ತೆರಿಗೆಯಲ್ಲಿ ನೊಂದಣಿ ಮಾಡಿಸಿ, ವಹಿವಾಟು ವಿವರ ತಿಳಿಸಿದ್ದಾರೆ. ಆದರೆ ಇದೇ ಅಪರಾಧ ಎಂಬಂತೆ 1 ಲಕ್ಷ 50 ಸಾವಿರ ವಾರ್ಷಿಕ ವರಮಾನ ಇದ್ದವರಿಗೆ ನೋಟಿಸ್ ನೀಡಲಾಗಿದೆ. ಇದು ಅಧಿಕಾರಿಗಳಿಗೆ ಬಡವರ ಮೇಲಿರುವ ತಾತ್ಸಾರ ಮನೋಭಾವನೆ ತೋರಿಸುತ್ತದೆ.
ಸರ್ಕಾರ, ಇಲಾಖೆಗೆ ಈ ನಿಲುವಿನಿಂದ ಬಡವರು ಬೀದಿಗೆ ಬೀಳುತ್ತಾರೆ ಎಂಬ ಪ್ರಜ್ಞೆ ಇಲ್ಲವಾಗಿದೆಯೇ..? ಬಡವರು ಕೆರಳಿ ರಸ್ತೆಗಿಳಿಯುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಕೂಡಲೇ ಆಹಾರ ನಾಗರೀಕ ಸರಬರಾಜು ಇಲಾಖೆ ಸಚಿವರು, ಮುಖ್ಯಮಂತ್ರಿಗಳು ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಚರ್ಚಿಸಿ, ನೋಟೀಸ್ ನೀಡಿರುವುದನ್ನು ಹಿಂಪಡೆಯಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್ಎಲ್ಎನ್ ವೇಣು, ಉಪಾಧ್ಯಕ್ಷರು ಜೋಗಳ್ಳಿ ಅಮ್ಮು, ಕಾರ್ಯದರ್ಶಿ ಮುಕ್ಕೇನಳ್ಳಿ ರವಿ, ನಗರ ಅಧ್ಯಕ್ಷ ಶ್ರೀನಗರ ಬಶೀರ್, ಉಪಾಧ್ಯಕ್ಷ ಮಂಜಣ್ಣ, ಕಾರ್ಯದರ್ಶಿ ಸಿರಾಜ್, ರಾಮ ಮಡಿವಾಳ.
ಬೆಂಗಳೂರು ನಗರ ವಿದ್ಯಾರ್ಥಿ ಘಟಕ ಹೇಮಂತ್, ಜೋಗಳ್ಳಿ ಶಾಖೆ ಮುನಿ ಕೃಷ್ಣಪ್ಪ, ಕೋಡಿಹಳ್ಳಿ ಶಾಖೆ ಅಧ್ಯಕ್ಷ ರವಿ, ಉಪಾಧ್ಯಕ್ಷ ಮುನಿಂದ್ರ, ಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ಮನು, ಸೂರಿ, ದಯಾನಂದ್, ನೂರಲ್, ವಾಸಿಂ, ಹರಿಕ್ ಪಾಶ, ಹಮಾಮ್ ಮಂಜುನಾಥ್ ಮತ್ತಿತರರಿದ್ದರು.