ಬೆಂ.ಗ್ರಾ.ಜಿಲ್ಲೆ: ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಎಸ್ಸೆಸ್ಸೆಲ್ಸಿ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ತರಲು ಕ್ರಮ ವಹಿಸಿ ಎಂದು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಆರ್ಥಿಕ ಇಲಾಖೆಯ (ಆಯವ್ಯಯ ಮತ್ತು ಸಂಪನ್ಮೂಲ) ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ (Dr. PC Jaffer) ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2025-26 ನೇ ಸಾಲಿನ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಗುಣಮಟ್ಟದ ಶಿಕ್ಷಣ ಅಗತ್ಯ, ಎಲ್. ಕೆ.ಜಿ, ಮತ್ತು ಯು.ಕೆ.ಜಿ ಯನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭ ಮಾಡಲಾಗಿದ್ದು, ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗಲಿದೆ. ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಮೂಲಭೂತ ಸೌಕರ್ಯಗಳನ್ನು ಒಂದು ಶಾಲೆಗೆ ಒದಗಿಸಿದರೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಲಿದೆ ಎಂದರು.
ಮುಂಬರುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಜಿಲ್ಲೆಗೆ ಒಳ್ಳೆಯ ಸ್ಥಾನ ಬರುವಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆಗೆ ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸುವ ಅಭಿಯಾನ ಮತ್ತು ಕಾರ್ಯಕ್ರಮಗಳನ್ನು ಮಾಡಿ.
61,513 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ
ಜಿಲ್ಲೆಯಲ್ಲಿ ಈ ಬಾರಿ 61,513 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ರಾಗಿ ಬೆಳೆಗೆ ರೂ.4886 ಬೆಂಬಲ ಬೆಲೆ ನೀಡಲಾಗುತ್ತಿದೆ, ಇದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸಬೇಕು. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳು ಒಟ್ಟು 3,698 ಕ್ವಿಂಟಾಲ್ ಬಿತ್ತನೆ ಬೀಜಗಳು ಬೇಡಿಕೆ ಇದ್ದು 3,304 ಕ್ವಿಂಟಾಲ್ ವಿತರಿಸಲಾಗಿದೆ. ಪ್ರಸ್ತುತ 31799 ಮೆಟ್ರಿಕ್ ಟನ್ ಮುಂಗಾರು ಹಂಗಾಮಿನ ರಸಗೊಬ್ಬರ ಬೇಡಿಕೆ ಇದೆ ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರವೇ ರಸಗೊಬ್ಬರ ಬೇಡಿಕೆ ನಿವಾರಿಸಿ ಎಂದರು.
ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಅಂದಾಜಿಸಿದಂತೆ ಅಂಕಿಅಂಶಗಳ ವರದಿ ಪ್ರಕಾರ ಜಿಲ್ಲೆಯಲ್ಲಿ 3,85,237 ಕುಟುಂಬಗಳಿದ್ದು 12,26,357 ಜನಸಂಖ್ಯೆ ಇದೆ. ಇದುವರೆಗೆ 3,01,800 ಕುಟುಂಬಗಳ 10,10,421 ಜನರ ಸಮೀಕ್ಷೆ ನಡೆಸಲಾಗಿದ್ದು ಶೇಕಡ 82.59% ರಷ್ಟು ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಜಿಲ್ಲೆಯಲ್ಲಿ 05 ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಸಮೀಕ್ಷೆಯಲ್ಲಿ ಬಿಟ್ಟು ಹೋದ ಕುಟುಂಬಗಳು, ಭಾಗವಹಿಸದೇ ಇರುವವರು ಸಹಾಯವಾಣಿ ಸಂಪರ್ಕಿಸಿದರೆ ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆ ಮಾಡಲಿದ್ದಾರೆ.
ನಿಗದಿತ ಅವಧಿಯೊಳಗೆ ಜಿಲ್ಲೆಯಲ್ಲಿ ಶೇಕಡ 100ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕೈಮಗ್ಗ ಮತ್ತು ವಿದ್ಯುತ್ ಮಗ್ಗದಿಂದ ಸಿದ್ಧ ಉಡುಪುಗಳನ್ನು ತಯಾರಿಸುತ್ತಿದ್ದು, ಅವರಿಗೆ ಜಿಲ್ಲೆಯಲ್ಲಿ ಉತ್ಪಾದನಾ ಘಟಕಗಳಿಗೆ ಒಂದು ಮಾರುಕಟ್ಟೆಯ ಅವಶ್ಯಕತೆಯಿದೆ. ಹಾಗಾಗಿ ಒಂದು ಸ್ಥಳವನ್ನು ಗುರುತಿಸಿ ಅಲ್ಲಿ ಮಾರುಕಟ್ಟೆಯನ್ನು ನಿರ್ಮಿಸಿಲಾಗುವುದು, ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೈಮಗ್ಗ ಮತ್ತು ಜವಳಿಯನ್ನು ಹಲವಾರು ಜನರು ತಮ್ಮ ಮನೆಗಳಲ್ಲಿ ಹಾಗೂ ಕೆಲವರು ಜಾಗವನ್ನು ಬಾಡಿಗೆಗೆ ಪಡೆದು ಮಗ್ಗವನ್ನು ಮಾಡುತ್ತಿದ್ದಾರೆ. ಇವರಿಗೆ ಎಸ್.ಎಂ.ಇ ಯೋಜನೆ ಹಾಗೂ ವಿವಿಧ ಯೋಜನೆಗಳಿಂದ ಲಭ್ಯವಿರುವ ಪ್ರೋತ್ಸಾಹ ಧನ, ಸಹಾಯಧನವನ್ನು ಒದಗಿಸುವ ಮೂಲಕ ಉತ್ತೇಜನ ನೀಡಬೇಕು.
ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಾಗೂ ಅಭಿಯಾಯನಗಳನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಸಬೇಕು. ನವೆಂಬರ್ ತಿಂಗಳಿನಲ್ಲಿ ಕಾಲುಬಾಯಿ ರೋಗಕ್ಕೆ ಉಚಿತವಾಗಿ ಲಸಿಕೆ ನೀಡಲಾಗುವುದು.
ಸಭೆಯಲ್ಲಿ ಎಲ್ಲಾ ಇಲಾಖೆಗಳ ಪ್ರಗತಿಯನ್ನು ಉದ್ದೇಶಿಸಿ ಮುಂದಿನ ಬಾರಿ ಯಾವುದೇ ಕಾರಣಗಳನ್ನು ನೀಡದೆ ಬಾಕಿ ಉಳಿದಿರುವ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ಕೆ.ಎನ್. ಅನುರಾಧ, ಜಿಲ್ಲಾ ಪೋಲಿಸ್ ವರಷ್ಠಾಧಿಕಾರಿ ಸಿ.ಕೆ ಬಾಬಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.