ದೊಡ್ಡಬಳ್ಳಾಪುರ: ನಗರದ ಹೃದಯ ಭಾಗದಲ್ಲಿ 90ರ ದಶಕದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಸಮೀಪ ಹಿರಿಯ ರಾಜಕಾರಣಿ ಜಾಲಪ್ಪ ಅವರು ದೂರದೃಷ್ಟಿಯಿಂದ ನಿರ್ಮಿಸಿದ್ದ ಹೊಸ ಬಸ್ ನಿಲ್ದಾಣ (ಕೆಎಸ್ಆರ್ಟಿಸಿ) ಇಂದು ನಿರ್ವಹಣೆ ಇಲ್ಲದೆ, ಬಸ್ಗಳು ಇಲ್ಲಿಗೆ ಬಾರದೇ ಪಾಳುಬಿದ್ದಿದೆ. ಇದನ್ನು ಅಭಿವೃದ್ಧಿಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಅವರು ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾಲಪ್ಪ ಅವರ ಜನ್ಮಶತಮಾನೋತ್ಸವ ಸಮಾರಂಭಕ್ಕೆ ಅ.19 ರಂದು ಭಾನುವಾರ ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಗುವುದು.
ನಗರದ ಆಯಕಟ್ಟಿನ ಸ್ಥಳದಲ್ಲಿ ಇಲ್ಲಿನ ಬಸ್ ಡಿಪೋ ಘಟಕವನ್ನು ನಗರದ ಹೊರಭಾಗಕ್ಕೆ ಸ್ಥಳಾಂತರಿಸಬೇಕು. ಇಲ್ಲಿನ ಎಲ್ಲಾ ಜಾಗವನ್ನು ಹೈಟೆಕ್ ಬಸ್ ನಿಲ್ದಾಣಕ್ಕೆ ಬಳಸಿಕೊಳ್ಳುವ ಮೂಲಕ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು.
ಇಲ್ಲಿ ಬಸ್ ನಿಲ್ದಾಣ ನಿರ್ಮಾಣವಾದರೆ ಎಪಿಎಂಸಿ ಮಾರುಕಟ್ಟೆ, ಶಾಲಾ ಕಾಲೇಜು ಹಾಗೂ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಿಗು ಸಾರ್ವಜನಿಕರು ಹೋಗಲು ಅನುಕೂಲವಾಗಲಿದೆ. ಅಲ್ಲದೆ ಬಸ್ಗಳು ಬಂದು ಹೋಗಲು ವಿಶಾಲವಾದ ರಸ್ತೆಯು ನಿರ್ಮಾಣವಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ತಾಲ್ಲೂಕುಗಳಲ್ಲಿ ದೊಡ್ಡಬಳ್ಳಾಪುರ ಈಗ ಪ್ರಥಮ ಸ್ಥಾನದಲ್ಲಿದೆ. ಹೆಚ್ಚುತ್ತಿರುವ ಕೈಗಾರಿಕೆಗಳು ಹಾಗೂ ಕ್ವಿನ್ ಸಿಟಿ ಯೋಜನೆಗಳು ನಗರದಲ್ಲಿ ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದೆ.
ಇಂತಹ ಸಂದರ್ಭದಲ್ಲಿ ಪಾಳು ಬಿದ್ದಿರುವ ಈ ಬಸ್ ನಿಲ್ದಾಣವನ್ನು ಬಳಸಿಕೊಳ್ಳಬೇಕಿದೆ. ಈ ಬಗ್ಗೆ ಶಾಸಕ ಧೀರಜ್ ಮುನಿರಾಜು ಅವರಿಗೂ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ರಾಜ್ಯ ಮುಖಂಡ ಪಿ.ವಾಸು, ನರೇಂದ್ರ, ಅರವಿಂದಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ತಾಲ್ಲೂಕು ಕಾರ್ಯಧ್ಯಕ್ಷ ಪ್ರದೀಪ್, ತಾಲ್ಲೂಕು ಕಾರ್ಮಿಕ ಘಟಕ ಶಿವಶಂಕರರೆಡ್ಡಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಾಧಾಮಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಸಾಸಲು ಹೋಬಳಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಇದ್ದರು.