ಬೆಂಗಳೂರು; ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಪರಿಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಶಿಸ್ತಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ನಡೆಸುತ್ತಿರುವುದರಿಂದ ಫಲಿತಾಂಶದಲ್ಲಿ ತೀವ್ರ ಕುಸಿತಗೊಂಡಿದೆ.
ಈ ಸಮಯದಲ್ಲಿಯೇ ರಾಜ್ಯ ಸರಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ಇಷ್ಟು ದಿನ ಉತ್ತೀರ್ಣಕ್ಕೆ ನಿಗದಿಪಡಿಸಿದ್ದ ಶೇಕಡವಾರು ಅಂಕವನ್ನು 35ರಿಂದ 33ಕ್ಕಿಳಿಸುವುದಾಗಿ ಘೋಷಿಸಿದೆ. ಇದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಲಿಖಿತ ಪರೀಕ್ಷೆಯಲ್ಲಿ ಶೇ.30ರಷ್ಟು ಅಂಕ ಪಡೆದರೂ ಪಾಸ್ ಎಂದು ಘೋಷಿಸಲಾಗಿದೆ.
ಪರೀಕ್ಷಾ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ‘ವೆಬ್ ಕಾಸ್ಟ್’ ತೀರ್ಮಾನದಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೀವ್ರ ಕುಸಿತವಾಗಿತ್ತು. ಫಲಿತಾಂಶದಲ್ಲಿನ ಕುಸಿತಕ್ಕೆ ಪೋಷಕರು, ತಜ್ಞರು ಹಾಗೂ ಸಾರ್ವಜನಿಕರು ಅಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ ಇದೀಗ ಫಲಿತಾಂಶವನ್ನು ಹೆಚ್ಚಿಸಲು ಹಾಗೂ ಸಣ್ಣ ಅಂತರದಲ್ಲಿ ಫೇಲಾಗುವ ವಿದ್ಯಾರ್ಥಿಗಳನ್ನು ಪಾಸು ಮಾಡುವ ಉದ್ದೇಶದಿಂದ ಸರಕಾರ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಪ್ರಸಕ್ತ ಸಾಲಿನಿಂದಲೇ ಎಸ್‌ಎಸ್‌ಎಲ್ ಸಿಯಲ್ಲಿ ಶೇ. 33 ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ಕ್ರಮ ಖಾಸಗಿ ಶಾಲೆಗಳಿಗೂ ಪ್ರಸಕ್ತ ಸಾಲಿನಿಂದಲೇ ಅನ್ವಯವಾಗಲಿದೆ.
ಶೇಕಡವಾರು ಫಲಿತಾಂಶ ಕಡಿಮೆ ಮಾಡಿರುವುದರಿಂದ ಇನ್ನು ಮುಂದೆ 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)