ಯಲಹಂಕ: ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ಕುರಿತು ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದ ಆದೇಶವನ್ನೇ ಬಳಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕಾರ್ಯಚಟುವಟಿಕೆಗಳಿಗೆ ಅನುಮತಿ ಕಡ್ಡಾಯಗೊಳಿಸಿದೆ.

ಇನ್ನೂ ಈ ಕುರಿತಂತೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ (S.R. Vishwanath) ಅವರು ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಅಭಿಯಾನ ಒಂದಕ್ಕೆ ಮುಂದಾಗಿದ್ದು, ಪ್ರತಿ ಬಿಜೆಪಿ ಕಾರ್ಯಕರ್ತರು ಆರ್‌ಎಸ್‌ಎಸ್‌ನ ಧೈಯಗೀತೆ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಗೀತೆಯನ್ನು ರಿಂಗ್ ಟೋನ್ ಹಾಗೂ ಕಾಲರ್ ಟ್ಯೂನ್‌ಗೆ ಹಾಕಿಕೊಳ್ಳ ಬೇಕಾಗಿ ಕಾರ್ಯಕರ್ತರಿಗೆ ಮನವಿ ಪೂರ್ವಕವಾದ ಕರೆ ನೀಡಿದ್ದಾರೆ.
ಅವರ ಮನವಿಗೆ ಓಗೊಟ್ಟಿರುವ ಬಿಜೆಪಿ ಕಾರ್ಯಕರ್ತರು ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಗೀತೆಯನ್ನು ರಿಂಗ್ ಟೋನ್ ಹಾಗೂ ಕಾಲರ್ ಟೋನ್ ಹಾಕಿಕೊಳ್ಳುವ ಮೂಲಕ ವಿನೂತನ ಅಭಿಯಾನ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್.ಆರ್ ವಿಶ್ವನಾಥ್ ಅವರು ‘ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಬೇಕು, ತಮಿಳು ನಾಡಿನ ಮಾದರಿಯಲ್ಲಿ ಆರ್‌ಎಸ್‌ಎಸ್‌ಗೆ ಅಂಕುಶವಹಾಕಬೇಕು ಎಂಬ ಕುಹಕದ ಮಾತುಗಳನ್ನಾಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್ (RSS) ಬ್ಯಾನ್ ಮಾಡುವುದಿರಲಿ, ನಮ್ಮ ‘ನಮಸ್ತೇ ವತ್ಸಲೇ ಮಾತೃಭೂಮಿ’ ರಿಂಗ್ ಟೋನ್ ಮತ್ತು ಕಾಲರ್ ಟ್ಯೂನ್, ಅನ್ನು ಬ್ಯಾನ್ ಮಾಡಲಿ ಸಾಕು ನೋಡೋಣ ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲೆಸೆದಿದ್ದಾರೆ.