ಮಡಿಕೇರಿ: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಶ್ರೀ ಕಾವೇರಿ (Kaveri) ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಿದ್ಧತೆ ನಡೆದಿದೆ.

ತಲಕಾವೇರಿ ಪವಿತ್ರ ತೀರ್ಥೋದ್ಭವ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕೆ ಅಗತ್ಯ ಬ್ಯಾರಿಕೇಡ್‍ಗಳ ನಿರ್ಮಾಣ ಮಾಡಲಾಗಿದೆ. ಭಕ್ತಾಧಿಗಳು ತೀರ್ಥ ಪಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಮಡಿಕೇರಿ, ಭಾಗಮಂಡಲ, ತಲಕಾವೇರಿಗೆ ಹೋಗುವ ರಸ್ತೆ ಬದಿಯಲ್ಲಿ ಕಾಡನ್ನು ಕಡಿಸಿ ಸುಗಮ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ತಲಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾಯಿ ಕಾವೇರಿ ಮಾತೆಯ ಭಕ್ತಿಗೀತೆಗಳ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದ್ದು, ಈ ಸಂಬಂಧ ವೇದಿಕೆ ನಿರ್ಮಾಣ ಮಾಡಲಾಗಿದೆ. ಕೊಡಗು ಏಕೀಕರಣ ರಂಗದಿಂದ ಭಕ್ತಾಧಿಗಳ ಪ್ರಸಾದ ವಿನಿಯೋಗಕ್ಕೆ ಅಗತ್ಯ ಸಿದ್ಧತೆಗಳು ನಡೆದಿವೆ.
ಪರಿಸರ ಶುಚಿತ್ವ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು
ಪರಿಸರ ಶುಚಿತ್ವ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಂದಾಯ, ಪೊಲೀಸ್, ಪಂಚಾಯತ್ ರಾಜ್, ಸೆಸ್ಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸಗಳನ್ನು ಕೈಗೊಂಡಿದ್ದಾರೆ.
ಗಣ್ಯರು, ಅತಿಥಿಗಳು, ಪತ್ರಕರ್ತರು ತೆರಳಲು ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಲಾಗಿದೆ. ತಲಕಾವೇರಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಎಲ್‍ಇಡಿ ವಾಲ್‍ಗಳ ಅಳವಡಿಕೆ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಎಸ್‍ಪಿ ಹಾಗೂ ಎಎಸ್‍ಪಿ ಸೇರಿದಂತೆ ಮೂವರು ಡಿವೈಎಸ್‍ಪಿ, 8 ಪೊಲೀಸ್ ಇನ್ಸ್‍ಪೆಕ್ಟರ್, 21 ಪಿಎಸ್‍ಐ, 41 ಎಎಸ್‍ಐ, 238 ಹೆಡ್ ಕಾನ್ಸ್‍ಟೇಬಲ್, 52 ಡಬ್ಲ್ಯುಪಿಸಿ, 2 ಕೆಎಸ್‍ಆರ್‍ಪಿ, 4 ಡಿಎಆರ್ ಇತರರನ್ನು ನಿಯೋಜಿಸಿ, ಅಗತ್ಯ ಬಂದೋ ಬಸ್ತ್ ಮಾಡಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಕ್ಟೋಬರ್, 17 ರಂದು ಮಧ್ಯಾಹ್ನ 1.44 ಗಂಟೆಗೆ ಪವಿತ್ರ ತೀರ್ಥೋದ್ಭವ ಸಂಭವಿಸಲಿದ್ದು. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ತಲಕಾವೇರಿ ಪವಿತ್ರ ಕುಂಡಿಕೆ ಬಳಿ ಹೂವಿನ ಅಲಂಕಾರ, ದೀಪಾಲಂಕಾರ ಮಾಡಲಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ, ತಲಕಾವೇರಿಯಿಂದ ಭಾಗಮಂಡಲದವರೆಗೆ 25 ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸಲಿದ್ದು, ಈ ಮಾರ್ಗದಲ್ಲಿ ಭಕ್ತಾಧಿಗಳು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ಹೇಳಿದರು.
ಸ್ವಚ್ಚ ಕೊಡಗು-ಸುಂದರ ಕೊಡಗು ಹೆಸರಿನಡಿ ಶುಚಿತ್ವಕ್ಕೆ ಒತ್ತು ನೀಡಲಾಗಿದ್ದು, ಭಕ್ತಾಧಿಗಳು ಸಹಕರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಕೋರಿದರು.
ಪ್ರಧಾನ ಅರ್ಚಕರಾದ ಗುರುರಾಜ್ ಆಚಾರ್ ಅವರು ಮಾತನಾಡಿ ಪವಿತ್ರ ತೀರ್ಥೋದ್ಭವದಂದು ಮಹಾ ಸಂಕಲ್ಪ, ಕುಂಕುಮಾರ್ಚನೆ ಸೇರಿದಂತೆ ಪೂಜಾ ವಿಧಿ ವಿಧಾನಗಳು ಬೆಳಗ್ಗೆಯಿಂದಲೇ ಆರಂಭವಾಗಲಿದೆ. ಸಂಜೆ ವೇಳೆಯಲ್ಲಿ ಮಹಾಪೂಜೆ ಹಾಗೂ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ 12 ಜನರನ್ನು ಒಳಗೊಂಡ ಅರ್ಚಕರ ತಂಡ ಪೂಜಾ ವಿಧಿವಿಧಾನ ನಡೆಸಿಕೊಡಲಿದ್ದಾರೆ. ಅಕ್ಟೋಬರ್, 17 ರಿಂದ ಒಂದು ತಿಂಗಳ ಕಾಲ ಪೂಜಾ ಕಾರ್ಯಗಳು ನಡೆಯಲಿದೆ. ಈ ಮಾಸದಲ್ಲಿ ಗಂಗೆ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಎಂಬ ಪ್ರತೀತಿ ಇದೆ ಎಂದು ಗುರುರಾಜ್ ಆಚಾರ್ ಅವರು ವಿವರಿಸಿದರು.
ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ಪ್ರತೀ ವರ್ಷದಂತೆ ಈ ವರ್ಷವೂ ಸಹ ಶ್ರೀ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪೂಜಾ ವಿಧಿ ವಿಧಾನಗಳು ನಡೆಯಲಿವೆ ಎಂದು ತಿಳಿಸಿದರು. ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದ ಇಒ ಚಂದ್ರಶೇಖರ್ ಇದ್ದರು.
ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿಯೂ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ತ್ರಿವೇಣಿ ಸಂಗಮದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದ ಇಒ ಚಂದ್ರಶೇಖರ್ ತಿಳಿಸಿದ್ದಾರೆ.
ಡಿಸಿಎಂ ಭೇಟಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಶ್ರೀಭಗಂಡೇಶ್ವರ, ತಲ ಕಾವೇರಿ ದೇವಾಲಯದಲ್ಲಿ ನಡೆಯುವ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ.