ಬೆಂಗಳೂರು: ಖಾತಾ ಮಾಡಿಸಲು 10-15 ಸಾವಿರ ಲಂಚ ಕೇಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೆ.ಆರ್. ಪುರಂ ಆರ್ ಓ ಬಸವರಾಜ್ ಅವರ ವಿರುದ್ಧ ಕ್ರಮ ಜರುಗಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ಕೆ ಆರ್ ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ “ಬೆಂಗಳೂರು ನಡಿಗೆ” ಅಭಿಯಾನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಕಾರ್ಯಕ್ರಮದ ವೇಳೆ ಸುಲ್ತಾನ್ ಮಿರ್ಜಾ ಎಂಬುವವರು ಮಾತನಾಡಿ, “ಇಷ್ಟು ದಿನ ನಮ್ಮ ಆಸ್ತಿಯ ಖಾತೆ ಮಾಡಿಸಲು ಬಹಳಷ್ಟು ಕಷ್ಟಪಡಬೇಕಾಗಿತ್ತು. ಆದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇದಕ್ಕಾಗಿ ಯೋಜನೆ ರೂಪಿಸಿ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಖಾತಾ ಮಾಡಿಸಲು ಕಂದಾಯ ಅಧಿಕಾರಿಗಳು ಹೆಚ್ಚು ಲಂಚ ಕೇಳುತ್ತಾರೆ. ಈ ವಿಚಾರವಾಗಿ ಬಿಬಿಎಂಪಿ ಕಮಿಷನರ್ ಬಳಿ ದೂರು ನೀಡಿದ್ದೇನೆ” ಎಂದರು.
ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಲಂಚ ಕೇಳುತ್ತಿರುವ ಅಧಿಕಾರಿಯ ಹೆಸರು ಹೇಳಿ, ನಾನು ಇಲ್ಲೇ ಆ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ” ಎಂದರು.
ಆಗ ಸುಲ್ತಾನ್ ಮಿರ್ಜಾ ಅವರು, “ಆರ್ ಓ ಬಸವರಾಜ್, ವಿಜಿನಾಪುರ ಆರ್ ಐ ಅವರು ಲಂಚದ ಬೇಡಿಕೆ ಇಟ್ಟಿದ್ದಾರೆ. ನಾನು ಕಳೆದ ಎರಡು ತಿಂಗಳಿನಿಂದ ಅಲೆದಾಡುತ್ತಿದ್ದು, ಇವರು 10-15 ಸಾವಿರ ಲಂಚದ ಬೇಡಿಕೆ ಇಡುತ್ತಿದ್ದಾರೆ. ಆನ್ ಲೈನ್ ಮೂಲಕ ಅರ್ಜಿ ಹಾಕಿದರೂ ಅನುಮೋದನೆ ನೀಡುವುದಿಲ್ಲ.
ಹೊರಮಾವು ಕಚೇರಿಗೆ ಹೋಗಿ ಎನ್ನುತ್ತಾರೆ. ಅಲ್ಲಿಗೆ ಹೋದರೆ ವಿಜಿನಾಪುರ ಬಿಬಿಎಂಪಿ ಕಚೇರಿಗೆ ಹೋಗಿ ಎನ್ನುತ್ತಾರೆ. ನನಗೆ ಮಾತ್ರ ತೊಂದರೆಯಾಗುತ್ತಿಲ್ಲ. ಹಿರಿಯ ನಾಗರಿಕರಿಗೂ ತೊಂದರೆಯಾಗುತ್ತಿದೆ. ಆ ಕಚೇರಿಯಲ್ಲಿ ಮಂಜು ಎನ್ನುವ ದಲ್ಲಾಳಿಯನ್ನು ಇಟ್ಟಿದ್ದಾರೆ. ಆತ ಪಾಲಿಕೆಯ ಸಿಬ್ಬಂದಿಯಲ್ಲ. ಆತ ಇದೆಲ್ಲವನ್ನು ನೋಡಿಕೊಳ್ಳುತ್ತಾನೆ ಎಂದು ದೂರಿದರು.
ನಂತರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಲಂಚ ಬೇಡಿಕೆ ವಿಚಾರವಾಗಿ ಶೀಘ್ರ ಪರಿಶೀಲನೆ ನಡೆಸಿ ಶನಿವಾರ (ಇಂದು) ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಇದರ ಜೊತೆಗೆ ಏಜೆಂಟ್ ವಿರುದ್ದ ಪೊಲೀಸ್ ಇಲಾಖೆ ಮತ್ತು ಪಾಲಿಕೆ ಕ್ರಮ ತೆಗೆದುಕೊಳ್ಳಲಿದೆ” ಎಂದು ತಿಳಿಸಿದರು.
ಆರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲವೆಂಬ ಸುಳ್ಳು ಆರೋಪ ಬಯಲಿಗೆಳೆದ ಡಿಸಿಎಂ
ಮಹಿಳೆಯೊಬ್ಬರು ತಮಗೆ ಆರು ತಿಂಗಳಿನಿಂದ ಗೃಹಲಕ್ಷ್ಮಿ ಬಂದಿಲ್ಲ, ಬೇಕಿದ್ದರೆ ನನ್ನ ಮೊಬೈಲ್ ಇಲ್ಲೇ ಇದೆ, ನೋಡಿ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ ಅವರು, ಆರು ತಿಂಗಳಿನಷ್ಟು ಬಾಕಿ ಇಟ್ಟಿಲ್ಲ. ಸಾರ್ವಜನಿಕರ ಮುಂದೆ ಸುಮ್ಮನೆ ಆರು ತಿಂಗಳಿಂದ ಬಂದಿಲ್ಲ ಎಂದರೆ ಹೇಗೆ? ಇಲ್ಲಿ ನಮ್ಮ ಅಧಿಕಾರಿಗಳ ತಪ್ಪಿರಬೇಕು ಅಥವಾ ಇವರ ಆರೋಪ ತಪ್ಪಾಗಿರಬೇಕು. ಹೀಗಾಗಿ ಇಲ್ಲೇ ಇದನ್ನು ಪರಿಶೀಲಿಸುತ್ತೇನೆ ಎಂದರು.
ನಂತರ ಶಿವಕುಮಾರ್ ಅವರು ತಮ್ಮ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಅವರ ಮೂಲಕ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ “ಇಲ್ಲಿ ಮಹಿಳೆಯೊಬ್ಬರು ಆರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಏನಾಗಿದೆ” ಎಂದು ವಿಚಾರಿಸಿದರು.
ದೂರವಾಣಿ ಕರೆಯಲ್ಲಿ ಅಧಿಕಾರಿಯು ‘ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಈ ತಿಂಗಳು ಸಂದಾಯವಾಗಿದೆ. ಈ ಮಹಿಳೆಯ ವಿಚಾರದಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ ಪರಿಶೀಲಿಸಿ, ಅದನ್ನು ಬಗೆಹರಿಸುವೆ’ ಎಂದು ತಿಳಿಸಿದರು.
ದೂರು ನೀಡಿದ ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ ರಾಜೇಂದ್ರ ಪ್ರಸಾದ್ ಅವರು, ಅಕ್ಟೋಬರ್ 3 ರಂದು ಜುಲೈ ತಿಂಗಳ ಗೃಹ ಲಕ್ಷ್ಮಿ ಹಣ ಪಾವತಿಯಾಗಿರುವ ಸಂದೇಶವನ್ನು ಡಿಸಿಎಂ ಅವರಿಗೆ ತೋರಿಸಿದರು. ಈ ವೇಳೆ ಶಿವಕುಮಾರ್ ಅವರು, ಗೃಹ ಲಕ್ಷ್ಮಿ ಹಣ ಪಾವತಿಯಾಗಿರುವ ಮೆಸೇಜ್ ಅನ್ನು ಸಾರ್ವಜನಿಕರ ಸಮ್ಮುಖದಲ್ಲಿ ಓದಿದರು.
“ಗೃಹಲಕ್ಷ್ಮಿ ಹಣದ ಪಾವತಿಯಾಗಿಲ್ಲ ಎಂದು ಈ ಮಹಿಳೆ ಮಾಡಿರುವ ಆರೋಪ ಸುಳ್ಳು. ಜುಲೈವವರೆಗಿನ ಹಣ ಸಂದಾಯವಾಗಿದ್ದು, ಆಗಸ್ಟ್ ತಿಂಗಳ ಹಣ ಸಂದಾಯ ಪ್ರಕ್ರಿಯೆಯಲ್ಲಿದೆ. ಈ ಮಹಿಳೆ ಆರೋಪ ಮಾಡಿದನ್ನು ನೋಡಿ ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂದು ತೀರ್ಮಾನಿಸಿದ್ದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ತರಾಟೆಗೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ, ಸದ್ಯ ಅವರು ಫೋನ್ ಕಾಲ್ ತೆಗೆದುಕೊಳ್ಳಲಿಲ್ಲ” ಎಂದರು.
ಯಾರೇ ಬೆದರಿಕೆ ಹಾಕಿದರೂ ಕಾನೂನು ಕ್ರಮ
ಎನ್.ಆರ್ ಲೇಔಟಿನ ನಿವಾಸಿ ವಿಘ್ನೇಶ್ ಎಂಬುವವರು ನಾನು 2 ವರ್ಷಗಳಿಂದ ನನ್ನ ನಿವೇಶನದಲ್ಲಿ ಮನೆ ಕಟ್ಟಿದ್ದು, ಆ ಜಾಗ ಖರೀದಿ ಮಾಡಬೇಕೆಂದು ಕೊಂಡಿದ್ದ ನೆರೆ ಮನೆಯ ವ್ಯಕ್ತಿ ಮಲ್ಲಿಕಾರ್ಜುನ್ ಎಂಬುವವರು ನಾನು ಕಟ್ಟಿರುವ ಮನೆಗೆ ಹೋಗಲು ಬಿಡುತ್ತಿಲ್ಲ. 10 ಲಕ್ಷ ಹಣ ನೀಡಬೇಕು. ಆಗ ಮಾತ್ರ ಮನೆ ಪ್ರವೇಶಿಸು ಎಂದು ರೌಡಿಗಳು ಹಾಗೂ ಕನ್ನಡಪರ ಸಂಘಟನೆಗಳ ಮೂಲಕ ಬೆದರಿಸುತ್ತಿದ್ದಾನೆ ಎಂದು ಕಣ್ಣೀರು ಹಾಕಿದರು.
ಇದಕ್ಕೆ ಸ್ಪಂದಿಸಿದ ಶಿವಕುಮಾರ್ ಅವರು, ಅವರು ಯಾವ ಸಂಘಟನೆಯವರೇ ಆಗಿರಲಿ, ಕಾಂಗ್ರೆಸ್ ನವರೇ ಆಗಿರಲಿ, ಬಿಜೆಪಿಗರೇ ಆಗಿರಲಿ, ದಳದವರೇ ಆಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ನೀವು ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಂಜೆ ವೇಳೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಅವರು 10 ಲಕ್ಷ ಕೇಳಿದ್ದೇ ಆದರೆ ಮೊದಲು ಲಿಖಿತ ದೂರು ನೀಡು ಕ್ರಮ ಕೈಗೊಳ್ಳುವಂತೆ ನಾನು ನೋಡಿಕೊಳ್ಳುತ್ತೇನೆ. ಒಮ್ಮೆ ದೂರು ಕೊಟ್ಟ ನಂತರ ಅದಕ್ಕೆ ಬದ್ಧವಾಗಿರಬೇಕು ಎಂದು ತಿಳಿಸಿದರು.
“ಪಾಲಿಕೆ ಆಧಿಕಾರಿಗಳು ಆ ಜಾಗಕ್ಕೆ ಹೋಗಿ ಪರಿಸ್ಥಿತಿ ಏನಿದೆ ಎಂದು ಪರಿಶೀಲಿಸಿ, ಹಣ ಕೇಳಿ ಬೆದರಿಕೆ ಹಾಕಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ” ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ
“ಮುಂದಿನ ದಿನಗಳಲ್ಲಿ ಐಟಿ- ಬಿಟಿ ಕಂಪನಿಗಳ ಜೊತೆ ನಾನು ಹಾಗೂ ಐಟಿ, ಕೈಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರುಗಳು ಪ್ರತ್ಯೇಕವಾಗಿ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸುತ್ತೇವೆ. ಟೀಕೆ ಟಿಪ್ಪಣಿ ಮಾಡುವವರಿಗೆ ನಮ್ಮ ಕೆಲಸವೇ ಉತ್ತರ ನೀಡುತ್ತದೆ. ನಾವು ನಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಾವು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಭಗವಂತ ಹಾಗೂ ಜನರು ನಮಗೆ ಆಶೀರ್ವಾದ ಮಾಡಿದ್ದು, ನಾವು ಅವರ ಸೇವೆ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಕೆ ಆರ್ ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ “ಬೆಂಗಳೂರು ನಡಿಗೆ” ಅಭಿಯಾನದ ಅಂಗವಾಗಿ “ನಾಗರಿಕರೊಂದಿಗೆ ಸಂವಾದ” ನಡೆಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
“ನೂತನ ಐದು ಪಾಲಿಕೆಗಳು ಬೆಂಗಳೂರಿನ ಅಭಿವೃದ್ಧಿಯಲ್ಲಿ ಇತಿಹಾಸ ಸೃಷ್ಟಿಸಲಿವೆ. ಬೆಂಗಳೂರು ನಗರದಿಂದ 6 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರ ಪೂರ್ವ ಪಾಲಿಕೆ 1600 ಕೋಟಿ ರೂಪಾಯಿ ಪಾಲು ಹೊಂದಿದೆ. ಈ ಮೊದಲು ಎಲ್ಲಾ ಭಾಗಗಳ ತೆರಿಗೆ ಹಂಚಿಕೆಯಾಗುತ್ತಾ ಇತ್ತು. ಈಗ ಆಯಾ ಪ್ರದೇಶಗಳ ತೆರಿಗೆ ಅಲ್ಲಿಯೇ ವಿನಿಯೋಗವಾಗಲಿದೆ” ಎಂದು ತಿಳಿಸಿದರು.
ಬೆಂಗಳೂರು ಪೂರ್ವ ಶ್ರೀಮಂತ ಪಾಲಿಕೆ, ಇಲ್ಲಿನ ಐಟಿ-ಬಿಟಿ ತೆರಿಗೆ ಆದಾಯ ಈ ಭಾಗದ ಅಭಿವೃದ್ಧಿಗೆ ಬಳಕೆ
ಕೆ.ಆರ್.ಪುರ ಹಾಗೂ ಮಹದೇವಪುರ ಒಳಗೊಂಡಿರುವ ಬೆಂಗಳೂರು ಪೂರ್ವ ಪಾಲಿಕೆ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಶ್ರೀಮಂತ ಪಾಲಿಕೆ. ಈ ಭಾಗದಲ್ಲಿ ಅನೇಕ ಐಟಿ ಬಿಟಿ ಕಂಪನಿಗಳಿದ್ದು, ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ 74ನೇ ತಿದ್ದುಪಡಿ ಅಡಿಯಲ್ಲಿ ಪಾಲಿಕೆ ರಚಿಸಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅಪಾರ ಹಣ ವಿನಿಯೋಗ ಮಾಡಬಹುದು.
ಈ ಹಿಂದೆ ಒಂದೇ ಪಾಲಿಕೆ ಇದ್ದಾಗ ಈ ಭಾಗದಿಂದ ಬರುವ ತೆರಿಗೆ ಆದಾಯವನ್ನು ಬೆಂಗಳೂರಿನ ಇತರೆ ಭಾಗಗಳ ಅಭಿವೃದ್ಧಿಗೆ ಬಳಕೆಯಾಗುತ್ತಿತ್ತು. ಈಗ ಹೊಸ ಕಾಯ್ದೆ ಮೂಲಕ ಈ ಭಾಗದಲ್ಲಿ ಕ್ರೂಢೀಕರಣವಾಗುವ ಅಷ್ಟೂ ಸಂಪನ್ಮೂಲವನ್ನು ಈ ಪಾಲಿಕೆಯ 50 ವಾರ್ಡ್ ಗಳ ಅಭಿವೃದ್ಧಿಗೆ ನೀಡಲಾಗುವುದು. ಇದರಿಂದ ಈ ಭಾಗದ ಐಟಿ ವಲಯ ಹಾಗೂ ನಾಗರೀಕರಿಗೆ ಉತ್ತಮ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಭರವಸೆ ನೀಡಿದರು.
ಜನರ ಸಮಸ್ಯೆಗಳ ಶೀಘ್ರ ನಿವಾರಣೆಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಟೆಂಡರ್ ಇಲ್ಲದೇ ಪಾಲಿಕೆಯ ಕೌನ್ಸಿಲ್ 10 ಕೋಟಿ ಮೊತ್ತದ ಕಾಮಗಾರಿಗಳಿಗೆ ಹಾಗೂ ಪಾಲಿಕೆ ಆಯುಕ್ತರು 3 ಕೋಟಿ ರೂಪಾಯಿ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಬಿಬಿಎಂಪಿ ಇದ್ದಾಗ 10 ಕೋಟಿ ಖರ್ಚು ಮಾಡಬಹುದಾಗಿತ್ತು. ಈಗ ಆ ಹಣ 50 ಕೋಟಿಗೆ ಏರಿಕೆಯಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಐದು ಪಟ್ಟು ಹೆಚ್ಚು ಅವಕಾಶ ದೊರೆತಿದೆ ಎಂದು ವಿವರಿಸಿದರು.
ಬೆಂಗಳೂರಿನ ಜನತೆಗೆ ನಮ್ಮ ಸರ್ಕಾರ ದೀಪಾವಳಿ ಕೊಡುಗೆ ನೀಡಿದೆ. ಕಂದಾಯ ಭೂಮಿಯಲ್ಲಿ ಕಟ್ಟಿರುವ ಮನೆಗಳಿಗೆ ‘ಬಿ’ ಖಾತೆ ಹೊಂದಿರುವ ಹಾಗೂ ಹೊಂದಿರದವರು 500 ರೂಪಾಯಿ ಶುಲ್ಕ ಹಾಗೂ ಆಸ್ತಿ ಮೌಲ್ಯದ ಶೇ.5 ರಷ್ಟು ಹಣ ಪಾವತಿ ಮಾಡಿದರೆ ‘ಎ’ ಖಾತೆ ನೀಡಲಾಗುವುದು ಎಂದರು.
ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ
ಕೆ.ಆರ್ ಪುರಂ ಭಾಗದಲ್ಲಿ ರಸ್ತೆ ಒತ್ತುವರಿ ಪ್ರಕರಣಗಳು ಹೆಚ್ಚಿವೆ. ಒಬ್ಬೊಬ್ಬರು ಐದಾರು ನಿವೇಶಗಳಲ್ಲಿ ಅಕ್ರಮ ನಿರ್ಮಾಣಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಕಟ್ಟುವ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೆಲಸಮ ಮಾಡಲಾಗುವುದು.
30×40 ಅಳತೆಯ ಕಟ್ಟಡಗಳಿಗೆ ಓಸಿ ಸಿಸಿ ವಿನಾಯಿತಿ ನೀಡಲಾಗಿದೆ. ಇದು ತಾತ್ಕಾಲಿಕ ವಿನಾಯಿತಿ. ಹೀಗಾಗಿ ಮುಂದೆ ಎಲ್ಲರೂ ಕಟ್ಟಡ ನಕ್ಷೆ ಅನುಮೋದನೆ ಪಡೆದುಕೊಳ್ಳಿ. ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಹಡಿಗಳನ್ನು ನಿರ್ಮಾಣ ಮಾಡುವುದು, ಸೆಟ್ ಬ್ಯಾಕ್ ಬಿಡದೆ ಒತ್ತೊತ್ತಾಗಿ ಮನೆ ಕಟ್ಟುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಕೆ.ಆರ್ ಪುರಂ ಸಂತೆ ಬೇರೆಡೆಗೆ ಸ್ಥಳಾಂತರದ ಬಗ್ಗೆ ಚರ್ಚಿಸುತ್ತೇವೆ
ಆಸ್ಪತ್ರೆ, ಅಕ್ರಮ ಭೂ ಒತ್ತುವರಿ, ಸಂತೆಯ ಸ್ಥಳಾಂತರ, ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ, ಪಾದಚಾರಿ ಮೇಲ್ಸೇತುವೆ, ಸಿಸಿಟಿವಿ ಅಳವಡಿಕೆ ವಿಚಾರವಾಗಿ ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲಾ ವಿಚಾರಗಳಿಗೂ ನಾವು ಶೀಘ್ರ ಸ್ಪಂದಿಸಲಿದ್ದೇವೆ. ಪಾದಚಾರಿ ಮಾರ್ಗ ಒತ್ತುವರಿ ತಪ್ಪಿಸಲು ರಸ್ತೆ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ನೀಡಲಾಗಿದೆ. ಶೇ.10-30 ರಷ್ಟು ಹಣ ಪಾವತಿಸಿದರೆ ವಾಹನ ನೀಡುವ ವ್ಯವಸ್ಥೆ ಪಾಲಿಕೆಯಲ್ಲಿದೆ.
ನಗರದಲ್ಲಿ ಸುಮಾರು 30 ಸಾವಿರ ರಸ್ತೆ ವ್ಯಾಪಾರಿಗಳಿದ್ದಾರೆ. ಎಲ್ಲೆಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಾಗರಿಕರೊಬ್ಬರು ಮನವಿ ನೀಡಿದ್ದಾರೆ. ಇವೆಲ್ಲದಕ್ಕೂ ಪ್ರಮುಖ ಆದ್ಯತೆ ನೀಡಿ ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ತಿಳಿಸಿದರು.
“ನಾನು ಈ ಹಿಂದೆ ನಗರಾಭಿವೃದ್ಧಿ ಸಚಿನನಾದ ಕಾಲದಿಂದಲೂ ಈ ಸಂತೆಯನ್ನು ನೋಡಿದ್ದೇನೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಜನಸಂಖ್ಯೆ ಹೆಚ್ಚಳವಾದ ಕಾರಣಕ್ಕೆ ಈಗ ತೊಂದರೆಯಾಗುತ್ತಿದೆ. ಸಂತೆ ನಡೆಯುವ ಜಾಗವನ್ನು ನಾನು ಪರಿಶೀಲನೆ ಮಾಡುತ್ತೇನೆ ಹಾಗೂ ಅದನ್ನು ಎಲ್ಲಿಗೆ ಸ್ಥಳಾಂತರ ಮಾಡಬಹುದು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.
ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ ಕ್ಷಮಿಸಿ
“ಉದ್ಯಾನ ನಡಿಗೆ ವೇಳೆ ಸಾರ್ವಜನಿಕರಿಂದ ಬಂದ ಅಹವಾಲು, ದೂರನ್ನು ಶೀಘ್ರ ಬಗೆಹರಿಸುತ್ತೇವೆ. ಪಕ್ಷದ ಕಾರ್ಯಕರ್ತರ ಉತ್ಸಾಹದಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಕಾರ್ಯಕರ್ತರನ್ನು ನಾನು ಬೇರೆ ಸಂದರ್ಭದಲ್ಲಿ ಭೇಟಿ ಮಾಡುತ್ತೇನೆ. ಈ ಕಾರ್ಯಕ್ರಮದಲ್ಲಿ ಜನರಿಗೆ ಹೆಚ್ಚು ಅವಕಾಶ ಸಿಗಬೇಕು. ಇಂದು ನನ್ನ ಬಳಿ ತಮ್ಮ ಅಹವಾಲು ಹೇಳಿಕೊಳ್ಳಲು ಯಾರಿಗೆ ಸಾಧ್ಯವಾಗಿಲ್ಲವೋ ಅವರು, 1533 ಸಹಾಯವಾಣಿಗೆ ಸಂಪರ್ಕಿಸಿ, ನಿಮ್ಮ ಅಹವಾಲುಗಳನ್ನು ಸಲ್ಲಿಸಬಹುದು” ಎಂದು ತಿಳಿಸಿದರು.
“ಇಲ್ಲಿ ಜನರು ಹೇಳಿಕೊಂಡ ಅಹವಾಲುಗಳನ್ನು ಮಾಧ್ಯಮಗಳು ದಾಖಲಿಸಿಕೊಂಡಿವೆ. ಯಾರೆಲ್ಲಾ ನನ್ನೊಂದಿಗೆ ಸಮಸ್ಯೆ ಹೇಳಿಕೊಂಡಿದ್ದಾರೋ ಅವರ ಅಹವಾಲು ಹಾಗೂ ದೂರವಾಣಿ ಸಂಖ್ಯೆ ದಾಖಲಿಸಿಕೊಂಡಿದ್ದಾರೆ. ನಮ್ಮ ಅಧಿಕಾರಿಗಳು ಈ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ಮತ್ತೆ ಕರೆ ಮಾಡುತ್ತೇವೆ. ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಿದ್ದೇವೆ ಎಂಬ ವಿಚಾರವನ್ನು ನಾವು ತಿಳಿಸುತ್ತೇವೆ. ಕಾನೂನು ಪ್ರಕಾರವಾಗಿರುವುದನ್ನು ನಾವು ಪರಿಹಾರ ನೀಡಿ, ಅಗತ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಮೆಟ್ರೋ, ಮೇಲ್ಸೇತುವೆ, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಟನಲ್ ರಸ್ತೆ ಸಂಪರ್ಕ
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನೀಡಲಾಗಿದ್ದು, ಮೇಲ್ಸೇತುವೆ, ಮೆಟ್ರೋ ಸೌಕರ್ಯ ಕಲ್ಪಿಸಲಾಗಿದ್ದು, ಟನಲ್ ರಸ್ತೆಯನ್ನು ಈ ಭಾಗಕ್ಕೆ ಕಲ್ಪಿಸಲಾಗುವುದು. ಈ ಭಾಗದ ಜನರೊಂದಿಗೆ ಹೆಜ್ಜೆ ಹಾಕಿ, ನೂರಾರು ನಿವಾಸಿಗಳ ಜೊತೆ ಚರ್ಚೆ ಮಾಡಿದ್ದೇನೆ. ನಾನು ನೂರಕ್ಕೆ ನೂರರಷ್ಟು ಸರಿಯಲ್ಲದಿರಬಹುದು. ಆದರೆ, ನಾನು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಈ ಭಾಗದ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಹಿರಿಯ ನಾಯಕರು, ಮಾಜಿ ಕಾರ್ಪೊರೇಟರ್ ಗಳು, ನಿವಾಸಿ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರ ಸಲಹೆಗಳನ್ನು ಸರ್ಕಾರ ಹಾಗೂ ಜಿಬಿಎ ಪರಿಹಾರ ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.
ಪ್ರಶ್ನೋತ್ತರ
ಅಭಿವೃದ್ಧಿಯಾಗಿಲ್ಲ ಎಂದು ಹೇಳುತ್ತಾರಲ್ಲಾ ಎಂದು ಕೇಳಿದಾಗ, “ಹೇಳುವವರು ಹೇಳುತ್ತಾರೆ. ಅವರ ತೆರಿಗೆ ಹಣ ಅವರ ಅಭಿವೃದ್ಧಿಯಾಗಲಿ ಎಂದು ನಾವು ಪ್ರತ್ಯೇಕ ಪಾಲಿಕೆ ಮಾಡಿದ್ದೇವೆ” ಎಂದು ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರದಿಂದಾಗಿ ಗುತ್ತಿಗೆದಾರರ ಬಿಲ್ ಸಮಸ್ಯೆ
ಗುತ್ತಿಗೆದಾರರ ಸಂಘ ಗಡುವು ನೀಡಿರುವ ಬಗ್ಗೆ ಕೇಳಿದಾಗ, ಗುತ್ತಿಗೆದಾರರ ಗಡುವು ನನಗೆ ಬರುವುದಿಲ್ಲ. ನಾನು ಅವರ ಸಂಘದ ಸಭೆ ಕರೆದಿದ್ದು, ಅವರೊಂದಿಗೆ ಮಾತನಾಡುತ್ತೇನೆ. ನಾನು ಬೆದರಿಕೆಗಳಿಗೆ ಹೆದರುವುದಿಲ್ಲ.
ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಬಜೆಟ್ ಗಿಂತ ಹೆಚ್ಚಿನ ವೆಚ್ಚಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಈ ಸಮಸ್ಯೆ ಉದ್ಭವಿಸಿದೆ. ಆದರೂ ನಾವು ಹಂತ ಹಂತವಾಗಿ ಅವರ ಬಿಲ್ ಬಾಕಿ ಪಾವತಿಸುತ್ತಿದ್ದೇವೆ. ಮುಂದೆಯೂ ಇದನ್ನು ಪಾವತಿ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ.
ಇನ್ನು ಯಾರಾದರೂ ಲಂಚ ಕೇಳುತ್ತಿದ್ದರೆ, ಅವರು ದೂರು ನೀಡಿ ದಾಖಲೆಗಳನ್ನು ಒದಗಿಸಲಿ. ನಂತರ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಚರ್ಚೆ ಮಾಡಿದರೆ ಪರಿಹಾರ ಸಿಗುವುದಿಲ್ಲ ಎಂದು ತಿಳಿಸಿದರು.
ರಸ್ತೆ ಅಭಿವೃದ್ಧಿ ಮಾಡುವುದಾದರೆ ಕಿರಣ್ ಮುಜುಂದಾರ್ ಅವರಿಗೆ ಅಗತ್ಯ ಸಹಕಾರ
ಬೆಂಗಳೂರಿನ 10-15 ರಸ್ತೆಗಳ ಅಭಿವೃದ್ಧಿ ಮಾಡಲು ಸಿದ್ಧ ಎಂದಿರುವ ಕಿರಣ್ ಮಜುಂದಾರ್ ಷಾ ಅವರ ಹೇಳಿಕೆ ನೀಡಿದ್ದು ಈ ಬಗ್ಗೆ ನಿಮ್ಮ ಬಗ್ಗೆ ಚರ್ಚೆ ಮಾಡಿದ್ದಾರಾ ಎಂದು ಕೇಳಿದಾಗ, “ಬಹಳ ಸಂತೋಷ ಅವರೇ ಯಾವ ರಸ್ತೆ ಅಭಿವೃದ್ಧಿ ಮಾಡುತ್ತಾರೆ ಎಂದು ಆಯ್ಕೆ ಮಾಡಿಕೊಳ್ಳಲಿ. ಈ ಬಗ್ಗೆ ನಮ್ಮ ಜೊತೆ ಅವರು ಚರ್ಚೆ ಮಾಡಿಲ್ಲ. ಅವರು ನಮ್ಮ ಜೊತೆ ಚರ್ಚೆ ಮಾಡಲಿ, ಅವರಿಗೆ ಅಗತ್ಯ ಸಹಕಾರ ನೀಡುತ್ತೇವೆ” ಎಂದು ತಿಳಿಸಿದರು.