ಬೆಂಗಳೂರು: ರಾಜ್ಯದಲ್ಲಿ ಅಂತಿಮ ಹಂತದಲ್ಲಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯು (Survey) ಕೆಲ ಜಿಲ್ಲೆಗಳಲ್ಲಿ ಪೂರ್ಣಗೊಳ್ಳದೇ ಇರುವುದರಿಂದ, 31ರವರೆಗೆ ಮುಂದುವರಿಸಲು ತೀರ್ಮಾನಿಸ ಲಾಗಿದೆ.

ಇದೇ ವೇಳೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಬಾಕಿಯಿರುವ ಸಮೀಕ್ಷೆಯ ಹೊರೆಯಿಂದ ಶಿಕ್ಷಕರಿಗೆ ‘ಮುಕ್ತಿ’ ನೀಡಲು ಮಹತ್ವದ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸಂಜೆ ಕೃಷ್ಣಾದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದರು.
ಸಚಿವರಾದ ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ, ಭೈರತಿ ಸುರೇಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್. ನಾಯಕ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು ಈ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿ ರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಿಸಿದರೂ ಪೂರ್ಣಗೊಂಡಿಲ್ಲ. ಆದರೆ ಶಿಕ್ಷಕರನ್ನು ಇನ್ನಷ್ಟು ದಿನಗಳ ಕಾಲ ಸಮೀಕ್ಷೆಗೆ ಬಳಸಿಕೊಂಡರೆ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಮೂರನೇ ಬಾರಿಗೆ ವಿಸ್ತರಣೆಯಾಗಿರುವ ಸಮೀಕ್ಷೆ ಯಿಂದ ಶಿಕ್ಷಕರನ್ನು ಹೊರಗಿಡಲು ನಿರ್ಧರಿಸಲಾಗಿದೆ.
3 ದಿನ ರಜೆ
ದಸರಾ ಸಮಯದಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸಮೀಕ್ಷಾದಾರರಿಗೆ ದೀಪಾವಳಿಯ ಸಮಯದಲ್ಲಿಯೂ ಸಮೀಕ್ಷೆ ನಡೆಸಿ ಎಂದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.20ರಿಂದ 22ರವರೆಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ. ಅ.23ರಿಂದ ಸಮೀಕ್ಷೆ ಪುನಃ ಪ್ರಾರಂಭವಾಗಲಿದೆ.
ಆಯಾ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ವಿವಿಧ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಂಡು 31ರೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲು ತೀರ್ಮಾನಿಸಲಾಗಿದೆ.