ದೊಡ್ಡಬಳ್ಳಾಪು: ತಾಲೂಕಿನಲ್ಲಿ ದೀಪಾವಳಿ (Dipavali) ಹಬ್ಬದ ಸಾಲಿನ ನರಕ ಚತುರ್ದಶಿ ಆಚರಿಸಲು ಸಿದ್ದತೆಗಳು ನಡೆಯುತ್ತಿವೆ. ಜನತೆ ದೀಪಾವಳಿಗಾಗಿ ಮನೆ, ವಾಣಿಜ್ಯ ಮಳಿಗೆಗಳನ್ನು ಶೂಚಿಗೊಳಿಸಿ ಹಬ್ಬ ಆಚರಣೆಗ ಸಿದ್ದರಾಗುತ್ತಿದ್ದಾರೆ.

ಈ ನಡುವೆ ದೀಪಾವಳಿಯ ಪ್ರಮುಖ ಆಕರ್ಷಣೆಯಾದ ಪಟಾಕಿಗಳ ಮಾರಾಟಕ್ಕಿದ್ದ ಆತಂಕ ತುಸು ದೂರವಾಗಿದ್ದು, ಪಟಾಕಿ ವ್ಯಾಪಾರಿಗಳು ಮಾರಾಟದ ನಿರೀಕ್ಷೆಯಲ್ಲಿದ್ದಾರೆ.
ನಗರದ ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಪಟಾಕಿ ಅವಘಡದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿಸದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇನ್ನು ದೀಪಾವಳಿಗಾಗಿ ಹಚ್ಚುವ ಪಟಾಕಿಗಳ ವ್ಯಾಪಾರಕ್ಕೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿ ಹಾಗೂ ಮಾಲಿನ್ಯರಹಿತ ಪಟಾಕಿಗಳ ಮಾರಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಎಂದಿನಂತೆ ಪಟಾಕಿ ಮಾರಾಟಕ್ಕೆ ಪರವಾನಗಿ ಸಿಗುವುದು ವಿಳಂಬವಾಗಿತ್ತು. ಪ್ರತಿವರ್ಷ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪಟಾಕಿಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿತ್ತು.
ಕಳೆದ ಎರಡು ವರ್ಷಗಳಿಂದ ಕೆಆರ್ಎನ್ ಲೋಕದ ಬಳಿ ಖಾಸಗಿ ಜಮೀನಿನಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡಲಾಗಿದೆ. ನಗರದ ಕೆಆರ್ಎನ್ ಲೋಕದ ರಸ್ತೆಯ ಕೆಸಿಪಿ ವೃತ್ತದ ಬಳಿ ಪರವಾನಗಿ ಪಡೆದ 12 ಅಂಗಡಿಗಳ ವ್ಯಾಪಾರಿಗಳು ಪಟಾಕಿಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ.
ಮಾರ್ಗ ಸೂಚಿ ಅನ್ವಯ ಮಾರಾಟ
ಸುಪ್ರೀಂ ಕೋರ್ಟ್ ಸೂಚನೆಯಂತೆ ಹಸಿರು ಪಟಾಕಿಗಳ ತಯಾರಿಕೆಯ ಮಾರ್ಗಸೂಚಿಗಳನ್ನು ಅನುಸರಿಸಿ ತಯಾರಿಸಲಾಗಿರುವ ಕಂಪನಿಗಳಿಂದಲೇ ಪಟಾಕಿಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಮಾರಾಟದ ಸ್ಥಳದಲ್ಲಿ ಬೆಂಕಿ ಆರಿಸುವ ಸಾಧನಗಳು, ನೀರಿನ ಡ್ರಮ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಆದ್ದರಿಂದ ಗ್ರಾಹಕರು ಯಾವುದೇ ಆತಂಕವಿಲ್ಲದೇ ಖರೀದಿಸಬಹುದು. ಆದರೆ ಎಂದಿನಂತೆ ನಮಗೆ ಪಟಾಕಿ ಅಂಗಡಿ ಇಡುವುದಕ್ಕೆ ಜಾಗ ನೀಡುವುದು ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಪರವಾನಗಿ ಪಡೆಯುವುದು ವಿಳಂಬವಾಗುತ್ತಿದೆ.
ಅತ್ತಿಬೆಲೆ ದುರಂತದ ಹಿನ್ನಲೆಯಲ್ಲಿ ಹೆಚ್ಚಿನ ಕಟ್ಟುಪಾಡುಗಳು ವಿಧಿಸಲಾಗಿದ್ದು, ಜಾಗ ಗುರುತಿಸುವುದು ಹಾಗೂ ಪರವಾನಗಿ ನೀಡುವುದು ವಿಳಂಬವಾಗಿದೆ. ಇದರಿಂದ ಅಂಗಡಿಗಳಿಗೆ ವ್ಯವಸ್ಥೆ ಮಾಡಿಕೊಳ್ಳಲು ತ್ರಾಸವಾಗಿದೆ. ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿದರೂ ಮುಂಚಿತವಾಗಿ ಹೇಳಿದರೆ ಅನುಕೂಲವಾಗಲಿದೆ.
ಭಾನುವಾರ ಸಂಜೆಯಿಂದ ವ್ಯಾಪಾರ ಬಿರುಸು
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಟಾಕಿಗಳ ಸರಬರಾಜು ಕಡಿಮೆಯಿದ್ದು, ಬೆಲೆಗಳು ಹೆಚ್ಚಾಗಿವೆ. ವ್ಯಾಪಾರ ಭಾನುವಾರ ಸಂಜೆಯಿಂದ ಆರಂಭಗೊಳ್ಳುತ್ತಿದ್ದು, ನಂತರ ಬಿರುಸುಗೊಳ್ಳಲಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಿಗಳು.
ಬೆಲೆ ಎರಿಕೆ ನಡುವೆ ದೀಪಾವಳಿಗೆ ಸ್ವಾಗತ
ದೀಪಾವಳಿ ಹಿನ್ನಲೆಯಲ್ಲಿ ಬಾಳೆಕಂದು ಮಾವಿನಸೊಪ್ಪು, ತರಕಾರಿಗಳ ಬೆಲೆ ಗಗನಕ್ಕೇರಿವೆ. ಆದರೆ ಶಾಮಂತಿಗೆ ಮೊದಲಾಗಿ ಬಿಡಿ ಹೂಗಳ ಬೆಲೆ ಎಂದಿನಂತಿವೆ. ದೀಪಾವಳಿಯಲ್ಲಿ ಮನೆ ಮುಂದೆ ಹಚ್ಚಿಡುವ ಹಣತೆಗಳ ಮಾರಾಟ ಭರದಿಂದ ಸಾಗಿದೆ.
ಮಾರುಕಟ್ಟೆ ಪ್ರದೇಶದಲ್ಲಿ ದೀಪಾವಳಿಗೆ ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿರುವ ಸಾರ್ವಜನಿಕರು ಹಬ್ಬ ಆಚರಿಸಲು ಸಿದ್ದವಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ಪದೇ ಪದೇ ಸುರಿಯುತ್ತಿರುವ ಮಳೆ ಹಿನ್ನಡೆಯನ್ನುಂಟು ಮಾಡುತ್ತಿದೆ.