ಹಾಸನ: ಯಾವುದೇ ಅಡೆತಡೆಗಳಿಲ್ಲದೆ ಹಾಸನಾಂಬ (Hasanamba) ದೇವಿಯ ದರ್ಶನ ನಡೆಯುತ್ತಿದ್ದು, ಶಾಸ್ರೋಕ್ತವಾಗಿ ಗುರುವಾರ ಮಧ್ಯಾಹ್ನ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅವರು, ಬುಧವಾರ ದರ್ಶನ ಬೆಳಗ್ಗೆ 5.30 ರಿಂದ ಸಂಜೆ 7.00ರವರೆಗೆ ನಿರಂತರವಾಗಿ ನಡೆಯುತ್ತದೆ.
ಈ ದಿನ ಮಧ್ಯಾಹ್ನ ನೈವೇದ್ಯ ಪೂಜೆ ಇರುವುದಿಲ್ಲ, ಆದ್ದರಿಂದ ದರ್ಶನ ದಿನಪೂರ್ತಿ ನಿರಂತರವಾಗಿ ನಡೆಯಲಿದೆ.
ಸಾರ್ವಜನಿಕ ದರ್ಶನ ಸಂಜೆ 7.00 ಗಂಟೆಗೆ ಮುಕ್ತಾಯವಾಗುತ್ತದೆ. ದರ್ಶನ ಪಡೆಯಲು ಬಯಸುವ ಭಕ್ತರು ಸಂಜೆ 5.00 ಗಂಟೆಯೊಳಗೆ ಆಗಮಿಸಲು ವಿನಂತಿಸಿದ್ದಾರೆ. ಅಲ್ಲದೆ ಗುರುವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ, ಇದುವರೆಗೂ 23 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. 1000, 300 ರೂ. ಲಾಡು ಪ್ರಸಾದ ಮಾರಾಟದಿಂದ 20 ಕೋಟಿ ಆದಾಯ ಬಂದಿದೆ ಎಂದಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರಿಂದ ಪ್ರೋಟೋಕಾಲ್ ಬಂದ್ ಮಾಡಿದ್ದೇವೆ. ಪ್ರೋಟೋಕಾಲ್ ಮುಗಿದ ಮೇಲೂ ಕೆಲವು ಗಣ್ಯರು ಸ್ವಾಮೀಜಿಗಳು ಬರುತ್ತಿದ್ದಾರೆ. ಅವರಿಗೆ ಪಾಸ್ ಹಾಗೂ ಸಾವಿರ ರು. ಟಿಕೆಟ್ ಮೂಲಕ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ.
ಬುಧವಾರ ಸಿದ್ದೇಶ್ವರಸ್ವಾಮಿ ಜಾತ್ರಾ
ಮಹೋತ್ಸವ ಹಾಗೂ ಕೊಂಡೋತ್ಸವ, ರಥೋತ್ಸವ ಇರುತ್ತದೆ. ರಾತ್ರಿ 12 ಗಂಟೆಯಿಂದ ಗುರುವಾರ ಬೆಳಗ್ಗೆ 5 ಗಂಟೆವರೆಗೆ ದೇವಾಲಯದ ಸುತ್ತಲೂ ಇರುವವರಿಗೆ ಹಾಗೂ ಸಾರ್ವಜನಿಕರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಬಾರಿಯ ಜಾತ್ರಾ ಮಹೋತ್ಸವ ಯಶಸ್ವಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಕೆಳವರ್ಗದ ಕಾರ್ಮಿಕರು ದುಡಿದಿದ್ದಾರೆ. ಇದರಿಂದಾಗಿ ಉತ್ಸವ ಅದ್ದೂರಿಯಾಗಿ ನಡೆದಿದೆ ಎಂದರು.