ಧಾರವಾಡ: ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆಯಾಗಲಿದೆ. ಆ ವಿಷಯವನ್ನು ಬೇರೆಡೆ ತಿರುಗಿಸಲು ಆರ್‌ಎಸ್‌ಎಸ್ ವಿಷಯವನ್ನು ತರಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ, ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಖಾಲಿ ಡಬ್ಬ ಶಬ್ದ ಮಾಡುವಂತೆ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಹಣ ಬಿಡುಗಡೆ ಮಾಡಿ, ಟೆಂಡರ್ ಮಾಡಿದ ಕಾಮಗಾರಿಗಳನ್ನು ಕಾಂಗ್ರೆಸ್ ನಾಯಕರು ಉದ್ಘಾಟಿಸುತ್ತಿದ್ದಾರೆ.
ಆರ್ಥಿಕ ಇಲಾಖೆಯಲ್ಲಿ ಯಾವ ಯೋಜನೆಗೂ ಹಣವಿಲ್ಲ. ಬಜೆಟ್‌ನಲ್ಲಿ ಒಟ್ಟು ಅನುದಾನ 80 ಸಾವಿರ ಕೋಟಿ ರೂ. ಇದ್ದರೆ, ಗ್ಯಾರಂಟಿಗಳಿಗೆ 60-70 ಸಾವಿರ ಕೋಟಿ ರೂ. ಆಗುತ್ತದೆ. ಉಳಿದ 10 ಸಾವಿರ ಕೋಟಿ ರೂ. ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಚಿವರ ಮನೆಯ ದುರಸ್ತಿ, ಕಾಂಗ್ರೆಸ್ ಸಮಾವೇಶಕ್ಕೆ, ಜಾತಿ ಗಣತಿಗೆ ಖರ್ಚು ಮಾಡುತ್ತಿದ್ದಾರೆ. ಈ ಸರ್ಕಾರ ಪಾಪರ್ ಆಗಿದೆ ಎಂದರು.
ಮಾಧ್ಯಮಗಳಲ್ಲಿ ರಸ್ತೆ ಗುಂಡಿಗಳ ಬಗ್ಗೆ ಸುದ್ದಿ ಬರುತ್ತಿದೆ. ಆ ವಿಚಾರವನ್ನು ಬೇರೆ ಕಡೆ ತಿರುಗಿಸಲು ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಮಾತಾಡುತ್ತಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಮಾಡಬೇಕೆಂದು ಎಲ್ಲೂ ನಿಯಮವಿಲ್ಲ.
ಸಂವಿಧಾನದಲ್ಲಿ ಆ ರೀತಿಯ ನಿಯಮವಿಲ್ಲ. ಸಾಧನೆಗಳು ಇಲ್ಲದೆ ಅಭಿವೃದ್ಧಿ ಮೂಲೆಗುಂಪಾಗಿದೆ. ಆರ್‌ಎಸ್‌ಎಸ್ ವಿರುದ್ಧ ಇವರ ತಾತ ಮುತ್ತಾತನ ಕಾಲದಿಂದಲೂ ಏನೂ ಮಾಡಿಲ್ಲ. ನೌಕರರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ನೀಡಿಲ್ಲ. ಹಣದ ಬದಲು ಹೆಣಗಳು ಬೀಳುತ್ತಿದೆ, ಆತ್ಮಹತ್ಯೆಗಳು ನಡೆಯುತ್ತಿದೆ. ಈ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಜನರು ಕೂಡ ಕಾಯುತ್ತಿದ್ದಾರೆ ಎಂದರು.
ನಾನು ನವೆಂಬರ್ ಕ್ರಾಂತಿ ಎಂದಾಗ ಬಿಜೆಪಿಯವರು ಬುರುಡೆ ಬಿಡುತ್ತಿದ್ದಾರೆ ಎಂದರು. ಈಗ ಯತೀಂದ್ರ ಸಿದ್ದರಾಮಯ್ಯ ಅದನ್ನೇ ಹೇಳುತ್ತಿದ್ದಾರೆ. ಕೆ.ಎನ್.ರಾಜಣ್ಣ ಹೇಳಿದಾಗ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಿದರು.
ಡಿ.ಕೆ.ಶಿವಕುಮಾರ್ ನಾಮ ಹಾಕಿಕೊಂಡು ಟೆಂಪಲ್ ರನ್ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ನಾಮ ಹಾಕಲು ಎಲ್ಲರೂ ಸಿದ್ಧತೆ ಮಾಡುತ್ತಿದ್ದಾರೆ. ಯತೀಂದ್ರ ಅವರ ಹೇಳಿಕೆ ಬಂದಿರುವುದು ಸಿದ್ದರಾಮಯ್ಯನವರ ಕಡೆಯಿಂದಲೇ ಎಂದರು.
ಗುತ್ತಿಗೆದಾರರಿಗೆ ಸುಮಾರು 30 ಸಾವಿರ ಕೋಟಿ ರೂ. ಬಿಲ್ ನೀಡಿಲ್ಲ. ಗುತ್ತಿಗೆದಾರರ ಸಂಘ ಬಿಜೆಪಿ ಕಮಿಶನ್ ಬಗ್ಗೆ ಹೇಳಿದ್ದರು. ಈಗ ಕಾಂಗ್ರೆಸ್ ಅವಧಿಯಲ್ಲೇ 60 ಪರ್ಸೆಂಟ್ ಕಮಿಶನ್ ಇದೆ ಎಂದು ಹೇಳುತ್ತಿದ್ದಾರೆ. ಉದ್ಯಮಿ ಮೋಹನ್‌ದಾಸ್ ಪೈ ಕೂಡ ಇದನ್ನೇ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಕಲೆಕ್ಷನ್ ಸಭೆ ಮಾಡಿ, ಬಿಹಾರ ಚುನಾವಣೆಗಾಗಿ 300-400 ಕೋಟಿ ರೂ. ಸಂಗ್ರಹ ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಸಚಿವ ಸ್ಥಾನ ಉಳಿಯಲು ಕಪ್ಪ ಕಾಣಿಕೆ ಕೊಡಿ ಎಂದು ಹೇಳಿ ಇಲಾಖಾವಾರು ಫಿಕ್ಸ್ ಮಾಡಿದ್ದಾರೆ. ಹಣ ನೀಡದಿದ್ದರೆ ಎಲ್ಲರನ್ನೂ ಕಳಿಸುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್ ದಾರಿ ತಪ್ಪಿದ ಮಗ ಆಗಿದ್ದಾರೆ. ದೆಹಲಿಯಲ್ಲಿರುವ ಇಟಲಿ ದೇವಸ್ಥಾನವನ್ನು ಅವರು ಸುತ್ತಬೇಕಿದೆ. ಹಿಂದೂ ದೇವಸ್ಥಾನಗಳಿಗೆ ಹೋಗಿ ಪ್ರಯೋಜನವಿಲ್ಲ ಎಂದರು.
ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ನಡೆದಿದೆ. ಜೊತೆಗೆ ಸಂಘಟನೆ ಹೆಚ್ಚಿಸಲು ಹುಬ್ಬಳ್ಳಿಗೆ ಭೇಟಿ ನೀಡಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು, ವರಿಷ್ಠರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.