ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar ) ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ನಡುವಿನ ರಾಜಕೀಯ ಕೆಸರೆರಚಾಟ ವಯಕ್ತಿಕ ಮಟ್ಟಕ್ಕೆ ಇಳಿದಿದ್ದು, ಇಬ್ಬರ ನಡುವೆ ತಂದಿಟ್ಟು ತಮಾಷೆ ನೋಡುವ ಕೆಲ ಖಾಸಗಿ ನ್ಯೂಸ್ ಚಾನಲ್‌ಗಳು TRP ಗಿಟ್ಟಿಸುತ್ತಿವೆ ಎಂಬ ಆಕ್ರೋಶದ ಮಾತು ಪ್ರಜ್ಞಾವಂತ ಮಾಧ್ಯಮ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.

ಹೌದು ತೀರ ವಯಕ್ತಿಕ ವಿಚಾರಗಳ ಕುರಿತಂತೆ ನಾ ಮುಂದು, ತಾ ಮುಂದು ಎಂದು ಸುದ್ದಿವಾಹಿನಿಗಳ ಮುಂದೆ ಮಾತಾಡುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಗುರುಗಳಾದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಕಿವಿ ಹಿಂಡಲು ಮುಂದಾಗಿದ್ದಾರೆ.
ಈ ಇಬ್ಬರು ಖಾಸಗಿ ಸುದ್ದಿವಾಹಿನಿಗಳ ಮುಂದೆ ಮಾತಾಡುತ್ತಿರುವ ರೀತಿಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರತಾಪ ಸಿಂಹ ಮತ್ತು ಪ್ರದೀಪ ಈಶ್ವರ ನನಗೆ ಅತ್ಯಾಪ್ತರು. ಅವರಿಬ್ಬರೂ ರಾಜಕೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯ ಬಿಟ್ಟು ವೈಯಕ್ತಿಕವಾಗಿ ಪರಸ್ಪರ ನಿಂದಿಸಿಕೊಳ್ಳುವುದನ್ನು ನೋಡಿ, ನಾನು ಕುಬ್ಜನಾಗಿ ಹೋಗಿದ್ದೇನೆ. “ಭಟ್ರೇ, ನಿಮ್ಮ ಶಿಷ್ಯರು ಬೀದಿ ಜಗಳವಾಡುವುದನ್ನು ನೋಡಿ ಸುಮ್ಮನಿದ್ದೀರಲ್ಲ?” ಎಂದು ಬೀದಿಯಲ್ಲಿ ಹೋಗುವವರೂ ನನ್ನನ್ನು ಪ್ರಶ್ನಿಸುವಂತಾಗಿದೆ.
ಇಷ್ಟು ದಿನಗಳ ಕಾಲ ನಾನು ಅವರ ರಾಜಕೀಯ ನಿಲುವು-ಒಲವುಗಳ ಬಗ್ಗೆ ಏನನ್ನೂ ಹೇಳದೇ ಅಂತರ ಕಾಯ್ದುಕೊಂಡಿದ್ದೆ. ಅವರವರ ರಾಜಕೀಯ ಅವರವರಿಗೆ ಅಂತ ಸುಮ್ಮನೆ ಇದ್ದೆ. ಅದು ನನಗೆ ಸಂಬಂಧಪಡದ ವಿಷಯ ಕೂಡ. ಆದರೆ ಬರಬರುತ್ತಾ ಇಬ್ಬರು ವೈಯಕ್ತಿಕ ನಿಂದನೆಯಲ್ಲಿ ತೊಡಗಿ ಹಳಿ ತಪ್ಪುತ್ತಿದ್ದಾರೆ ಅನಿಸಲಾರಂಭಿಸಿತು.
ನನಗೆ ಇಬ್ಬರೂ ಬೇಕಾದವರೇ. ನಾನು ಇಬ್ಬರ ಶ್ರೇಯಸ್ಸನ್ನು ಬಯಸುವವನು. ಇಬ್ಬರೂ ಶರಂಪರ ಜಗಳವಾಡುವುದನ್ನು ನೋಡಿ ಸುಮ್ಮನಿದ್ದರೆ, ನಾನು ನೈತಿಕ ಹೊಣೆಗಾರಿಕೆಯಿಂದ ವಿಮುಖನಾಗುತ್ತಿದ್ದೇನೆ ಎಂದು ಎರಡು ದಿನಗಳಿಂದ ನನಗೆ ಬಲವಾಗಿ ಅನಿಸುತ್ತಿದೆ.
ಇಬ್ಬರಲ್ಲೂ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ – ಇಬ್ಬರೂ ರಾಜಕೀಯ ಮತ್ತು ಜನಪರ ವಿಷಯಗಳ ಬಗ್ಗೆ ಚರ್ಚೆ ಮಾಡಿ, ವಾದ-ಸಂವಾದ ಮಾಡಿ, ಒಳ್ಳೆಯದೇ. ದಯವಿಟ್ಟು ನಿಮ್ಮ ಜಗಳದಲ್ಲಿ ನಿಮ್ಮ ತಂದೆ-ತಾಯಿಗಳನ್ನು ಎಳೆಯಬೇಡಿ. ಅಂದರೆ ನಿಮ್ಮ ನಿಮ್ಮ ವೈಯಕ್ತಿಕ ಮತ್ತು ತೀರಾ ಕ್ಷುಲ್ಲಕ ವಿಷಯಗಳನ್ನು ಪ್ರಸ್ತಾಪಿಸಿ ಕಿತ್ತಾಡಬೇಡಿ.
ಇಬ್ಬರೂ ಯುವ ನಾಯಕರಾಗಿ ಈಗಾಗಲೇ ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೀರಿ, ಭರವಸೆ ಮೂಡಿಸಿದ್ದೀರಿ. ಆ ಕುರಿತು ನನಗೆ ನಿಮ್ಮಿಬ್ಬರ ಬಗ್ಗೆ ಅತೀವ ಅಭಿಮಾನವಿದೆ. ನಿಮ್ಮಿಬ್ಬರಿಗೂ ಸುದೀರ್ಘವಾದ ರಾಜಕೀಯ ಜೀವನವಿದೆ, ಇನ್ನೂ ಉತ್ತಮ ಭವಿಷ್ಯವಿದೆ.
ಜನರ ನಿರೀಕ್ಷೆಯೂ ನಿಮ್ಮಿಬ್ಬರ ಮೇಲೆ ಜಾಸ್ತಿಯಿದೆ. ಒಮ್ಮೆ ಸಮಾಧಾನದಿಂದ ನೀವು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿ. ಈ ಕಿತ್ತಾಟವನ್ನು ಇಲ್ಲಿಗೆ ನಿಲ್ಲಿಸಿ, ಸಾಕು. Enough.”