ಹಾಸನ; ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆಯ (Hasanabha) ಸಾರ್ವಜನಿಕ ದರ್ಶನಕ್ಕೆ ವಿಧ್ಯುಕ್ತ ತೆರೆ ಬಿದ್ದಿದೆ. ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆದು 14 ದಿನ ದರ್ಶನ ನೀಡಿದ್ದು, ಗುರುವಾರ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೇಗುಲದ ದ್ವಾರ ಮುಚ್ಚಲಾಗಿದೆ.

ಶ್ರೀ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವು ಅ.09 ರಿಂದ ಅ.23 ರವರೆಗೆ ನಡೆದಿದ್ದು 25,59,87,327 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ.
1000 ರೂ., 300 ರೂ. ಟಿಕೆಟ್ ಹಾಗೂ ಲಾಡುಪ್ರಸಾದ ಮಾರಾಟದಿಂದ ಒಟ್ಟು 21,91,75,052 ರೂ. ಆದಾಯ ಬಂದಿರುತ್ತದೆ. ಅಲ್ಲದೆ ಹುಂಡಿ ಎಣಿಕೆಯಲ್ಲಿ 3,68,12,275 ರೂ. ಬಂದಿರುತ್ತದೆ. ಕಾಣಿಕೆ ರೂಪದಲ್ಲಿ 75 ಗ್ರಾಂ. 300 ಮಿಲಿ ಚಿನ್ನ, ಬೆಳ್ಳಿ 1 ಕೆ.ಜಿ 58 ಗ್ರಾಂ. 400 ಮಿಲಿ ಹುಂಡಿಗೆ ಭಕ್ತರು ಹಾಕಿದ್ದಾರೆ ಎಂದು ತಿಳಿಸಿದರು.
ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆ ನಡೆದಿದ್ದು, 15,17,785 ರೂ ಆದಾಯ ಸಂಗ್ರಹವಾಗಿದೆ.
ಕಳೆದ ವರ್ಷ ದೇವಾಲಯಕ್ಕೆ 12 ಕೋಟಿ 40 ಲಕ್ಷ ಆದಾಯ ಬಂದಿದ್ದು, ಈ ವರ್ಷ ಸಚಿವ ಕೃಷ್ಣ ಬೈರೇಗೌಡರ ಶಿಸ್ತು ಬದ್ಧ ಕಾಳಜಿಯಿಂದ ಆದಾಯ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ.
ದಾಖಲೆ ಸೃಷ್ಟಿ
ಹಲವು ವಿಶೇಷತೆಗಳಿಂದ ಕೂಡಿದ್ದ ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವ ನಿರೀಕ್ಷೆಯಂತೆಯೇ ಐತಿಹಾಸಿಕ ದಾಖಲೆ ಸಹ ಬರೆದಿದೆ. ಕಳೆದ ವರ್ಷ 17,42,240 ಮಂದಿ ಭಕ್ತರು ದೇವಿ ದರ್ಶನ ಪಡೆದಿದ್ದರು. ಒಟ್ಟಾರೆ ಕಾಣಿಕೆ ರೂಪದ ಆದಾಯ 12,63,83,808 ರೂ. ಸಂಗ್ರಹ ವಾಗಿತ್ತು.
ಇದು ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ವರೆಗಿನ ಹೊಸ ದಾಖಲೆ ಆಗಿತ್ತು. ಆದರೆ 2025ರಲ್ಲಿ ಅಳಿಸಲು ಕಷ್ಟ ಎನ್ನುವಂತಹ ವಿನೂತನ ದಾಖಲೆ ಸೃಷ್ಟಿಯಾಗಿದೆ.
ಆ.09 ರಿಂದ 23ರವರೆಗೆ 26,06,691 ಭಕ್ತರು ದೇವಿಯ ದರ್ಶನ ಪಡೆದಿದ್ದು, ಒಂದು ದಾಖಲೆಯಾದರೆ, ಒಟ್ಟಾರೆ ಆದಾಯ 25,59,87,327 ಕೋಟಿ ತಲುಪಿರುವುದು ಹೊಚ್ಚ ಹೊಸ ದಾಖಲೆಯಾಗಿದೆ.
ಈ ಬಾರಿ ಅಚ್ಚುಕಟ್ಟು, ಶಿಸ್ತುಬದ್ಧ ಉತ್ಸವ ನಡೆದಿದ್ದು ಒಂದು ಸಂತೋಷವಾದರೆ, ಆದಾಯ ಗಣನೀಯವಾಗಿ ಏರಿಕೆಯಾಗಿರುವುದು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ಕಾಳಜಿಗೆ ಹಿಡಿದ ಕೈಕನ್ನಡಿಯಾಗಿದೆ.