ಬೆಂಗಳೂರು: ಆರ್ ಎಸ್ ಎಸ್ ಪಥ ಸಂಚಲನ ಇವತ್ತು ನಿನ್ನೆಯಿಂದ ಮಾಡುತ್ತಿಲ್ಲ. ದಶಕಗಳಿಂದ ಮಾಡಿಕೊಂಡು ಬರುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್ ಎಸ್ ಎಸ್ ವಿಷಯ ಮುನ್ನೆಲೆಗೆ ತಂದಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಕಟುವಾಗಿ ಟೀಕಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಅನ್ನು ನಿಷೇಧ ಮಾಡೋದಕ್ಕೆ ಸಾಧ್ಯವಿಲ್ಲ. ನಿತ್ಯ ಯಾಕೆ ಅವರ ಬಗ್ಗೆ ಮಾತಾಡ್ತೀರ? ಅವರ ಪಾಡಿಗೆ ಅವರು ಏನು ಮಾಡಿಕೊಂಡು ಹೋಗ್ತಾ ಇದ್ದಾರೆ. ಆರ್ ಎಸ್ ಎಸ್ ಬಗ್ಗೆ ಮಾತಾಡಿ ಸಮಯ ಯಾಕೆ ವೇಸ್ಟ್ ಮಾಡ್ತೀರಾ ಎಂದು ಹರಿಹಾಯ್ದರು.
ಸ್ವಲ್ಪ ದಿನ ಧರ್ಮಸ್ಥಳದ ಮೇಲೆ ಬಿದ್ದಿರಿ. ಎಸ್ ಐಟಿ ಅಂತ ಮಾಡಿ ಕಾಲಹರಣ ಮಾಡಿದಿರಿ. ಈಗ ಮಹೇಶ್ ಶೆಟ್ಟಿ ತಿಮರೋಡಿಗೆ ಒಂದು ಕೇಸಿನಲ್ಲಿ ರಿಲೀಫ್ ಸಿಕ್ಕಿದೆ. ಈ ಸರ್ಕಾರದ ಕಾಲದಲ್ಲಿ ಯಾವುದು ತಾರ್ಕಿಕ ಅಂತ್ಯಕ್ಕೆ ಹೋಗಲ್ಲ. ಸುಖಾ ಸುಮ್ಮನೆ ಕಾಲಹರಣ ಮಾಡಿಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಚಿವರು ದೂರಿದರು.
ಮೊದಲು RSS ಬಗ್ಗೆ ಮಾತಾಡೋದು ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಿ. ರಾಜ್ಯದಲ್ಲಿ ಇರೋ ಸಮಸ್ಯೆಗೆ ಪರಿಹಾರ ಕೊಡೋ ಕೆಲಸ ಮಾಡಿ. ಬರೀ ಟೀಕೆಗಳಿಂದ ಉಪಯೋಗ ಇಲ್ಲ ಎಂದು ಅವರು ಹೇಳಿದರು.
ಯಾರು ಬೇಕಾದರೂ ಸಿಎಂ ಆಗಬಹುದು
ಸತೀಶ್ ಜಾರಕಿಹೋಳಿ ಅವರು ಸಿಎಂ ಆಗಲಿ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಬಂದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಲ್ಲಿ ಯಾರು ಬೇಕಾದರೂ ಈ ದೇಶದಲ್ಲಿ ರಾಜಕೀಯವಾಗಿ ಸಿಎಂ ಆಗಬಹುದು. ಅದು ಅವರ ಪಕ್ಷದ ವಿಚಾರ. ಯಾರನ್ನ ಸಿಎಂ ಮಾಡಬೇಕು. ಬೇಡ ಅಂತ ತೀರ್ಮಾನ ಅವರೇ ಮಾಡ್ತಾರೆ. ಅದನ್ನ ಕಟ್ಟಿಕೊಂಡು ನನಗೇನು ಆಗಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಆರ್ ಎಸ್ ಎಸ್ ನಿಷೇಧ ಮಾಡೋದು ಮುಖ್ಯವಲ್ಲ. ಯಾಕೆ ನಿತ್ಯ ಇದನ್ನ ಇಟ್ಟುಕೊಂಡು ಕೂತಿದ್ದೀರಾ? ಮೊದಲು ಜನರ ಸಮಸ್ಯೆ ಪರಿಹಾರ ಮಾಡಿ ಎಂದು ಸರ್ಕಾರದ ಮೇಲೆ ಚಾಟಿ ಬೀಸಿದರು.
ಡಿ.ಕೆ. ಶಿವಕುಮಾರ್‌ಗೆ ತಿರುಗೇಟು
ಕುಮಾರಸ್ವಾಮಿ ಫ್ಯಾಕ್ಟರಿ ಕಟ್ಟಲಿ, ಅನುಮತಿ ಕೊಡ್ತೀವಿ ಎಂದು ಡಿಸಿಎಂ ಡಿಕೆಶಿ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ನಾನು ಸಿಎಂ ಆಗಿದ್ದಾಗ ಏನೆಲ್ಲ ಸುಧಾರಣೆಗಳನ್ನು ತಂದಿದ್ದೇನೆ ಎಂಬುದನ್ನು ಅವರು ತಿಳಿದುಕೊಳ್ಳಲಿ.
ಕಾಂಪಿಟ್ ವಿತ್ ಚೈನಾ ಎನ್ನುವ ಯೋಜನೆ ಮಾಡಿದೆ.9 ಕ್ಲಸ್ಟರ್ ಗಳಲ್ಲಿ ಕೈಗಾರಿಕೆ ಮಾಡಿದ್ದೆ. ಲಕ್ಷಾಂತರ ಜನರಿಗೆ ಉದ್ಯೋಗ ಮಾಡಿಕೊಡಲು ಯೋಜನೆ ಅದಾಗಿತ್ತು. ಕೈಗಾರಿಕೆ ಕ್ಷೇತ್ರಕ್ಕೆ 25 ಸಾವಿರ ಕೋಟಿ ಸಬ್ಸಿಡಿ ನೀಡುವ ಯೋಜನೆ ಇತ್ತು. ಆದರೆ ಇವರು ಸೇರಿ ನನ್ನ ಸರ್ಕಾರ ತೆಗೆದರು. ಇವರ ಯೋಗ್ಯತೆಗೆ ಗುಂಡಿ ಮುಚ್ಚೋಕೆ ಆಗಿಲ್ಲ. ಯಾಕ್ಕೆ ಆಗಿಲ್ಲ ಇವರಿಂದ? ಎಂದು ಡಿಕೆಶಿಗೆ ತಿರುಗೇಟು ಕೊಟ್ಟರು.
ಚರ್ಚೆ ಮಾಡುವಷ್ಟು ಯೋಗ್ಯತೆ ಉಳಿಸಿಕೊಂಡಿಲ್ಲ
ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿರುವ ಡಿಕೆಶಿಗೆ ಟಾಂಗ್ ಕೊಟ್ಟ ಕೇಂದ್ರ ಸಚಿವರು, ಚರ್ಚೆ ಮಾಡುವಷ್ಟು ಯೋಗ್ಯತೆ ಆ ವ್ಯಕ್ತಿಗೆ ಇಲ್ಲ ಎಂದರು.
ಬಹಿರಂಗ ಚರ್ಚೆ ಅವರ ಜೊತೆ ಮಾತಾಡೋಕೆ ಆಗುತ್ತಾ? ಯೋಗ್ಯತೆ ಉಳಿಸಿಕೊಂಡಿಲ್ಲ ಅವರು. ಅವರ ರೀತಿ ದುಡ್ಡು ಹೊಡೆಯೋ ಕೆಲಸ ನಾನು ಮಾಡಿಲ್ಲ. ನಾನು ಸಿಎಂ ಆಗಿದ್ದಾಗ ಏನೇನು ಕೆಲಸ ಮಾಡಿದ್ದೇನೆ ನೋಡಿಲಿ. ಕೇಂದ್ರದಲ್ಲಿ ನನ್ನ ಖಾತೆಗಳು ಏನು? ಅವುಗಳ ಕಾರ್ಯವ್ಯಾಪ್ತಿ ಏನು? ಎಂಬುದನ್ನು ಮೊದಲು ತಿಳಿಯಲಿ.
ನನ್ನ ಇಲಾಖೆ ಕಾರ್ಖಾನೆ ತರುವ ಇಲಾಖೆ ಅಲ್ಲ. ಕೆಲವು ನೀತಿಗಳನ್ನು ರೂಪಿಸುವ, ಕೆಲ ಉತ್ತೇಜನಕಾರಿ ಸೌಲಭ್ಯಗಳನ್ನು ನೀಡುವ ಇಲಾಖೆ. ಬೃಹತ್ ಕೈಗಾರಿಕೆ ಖಾತೆ ಎಂದರೆ ಕಾರ್ಖಾನೆ ಸ್ಥಾಪನೆ ಮಾಡುವ ಖಾತೆ ಅಲ್ಲ. ಆದರೂ ನನ್ನ ಕೆಲಸ ನಾನು ಮಾಡುತ್ತಿದ್ದೇನೆ.
ಬೆಂಗಳೂರು ನಗರಕ್ಕೆ 4,500 ಎಲೆಕ್ಟ್ರಿಕ್ ಬಸ್ಸುಗಳನ್ನು ಕೊಡಲು ನಿರ್ಧಾರ ಮಾಡಿದ್ದೇನೆ. ರಾಜ್ಯಕ್ಕೆ ಸಂಬಂಧಿಸಿ ಇನ್ನು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದು ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.
ಹಿಂದೆ ಬೆಂಗಳೂರು ನಗರಾಭಿವೃದ್ಧಿ ಮಂತ್ರಿ ಆಗಿದ್ದ ಈ ವ್ಯಕ್ತಿ, ಎಷ್ಟು ಕಾರ್ಖಾನೆ ಮಾಡಿದ್ದಾರೆ? ಕಾರ್ಖಾನೆ ಮಾಡುವುದು ಇರಲಿ, ಎಷ್ಟು ಸೊಸೈಟಿ ನುಂಗಿದ್ದಾರೆ ಎನ್ನುವುದು ಗೊತ್ತಿದೆ. ಪಟ್ಟಿ ಧಾರಾವಾಹಿ ತರಹ ಬಿಡ್ತೀನಿ ಬೇಕಾದರೆ.. ಎಂದು ಕಿಡಿಕಾರಿದರು
ಕುಮಾರಸ್ವಾಮಿ ಅವರು ಮೋದಿ ಮುಂದೆ ಅನುದಾನ ಕೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು; ನಾನು ಯಾಕೆ ಅನುದಾನ ಕೇಳಲಿ? ಜನ 136 ಸ್ಥಾನ ಕೊಟ್ಟಿರೋದು ನಿಮಗೆ. ನಾನು ಯಾಕೆ ಮಾತಾಡಲಿ. ನಾನು ಸಿಎಂ ಆಗಿದ್ದಾಗ ಮೋದಿ ದುಡ್ಡು ಕೊಡಲಿಲ್ಲ.. ಮೋದಿ ದುಡ್ಡು ಕೊಡಲಿಲ್ಲ ಎಂದು ಕೈಕಟ್ಟಿ ಕೂತೆನಾ? ಪ್ರವಾಹ ಬಂದಾಗ ಕೊಡಗಿನಲ್ಲಿ 1000 ಮನೆ ಕಟ್ಟಿಸಿದ್ದೇನೆ. ಕೇಂದ್ರ ಹಣ ಕೊಡಲಿಲ್ಲ ಎಂದು ಸುಮ್ಮನೆ ಇರಲಿಲ್ಲ. ಇವರಿಗೆ ಅಂತಹ ಯೋಗ್ಯತೆ, ಇಚ್ಛಾಶಕ್ತಿ.ಇಲ್ಲ ಎಂದು ಅವರು ದೂರಿದರು.
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಎಸ್.ಎಲ್. ಭೋಜೇಗೌಡ, ಜವರಾಯಿಗೌಡ, ವಿವೇಕಾನಂದ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಹಾಜರಿದ್ದರು.