ವಿಜಯಪುರ: ಸಂಘ ಪರಿವಾರ (RSS) ಇಲ್ಲದೇ ಹೋದರೆ ನಾವೆಲ್ಲರೂ ಮುಲ್ಲಾಗಳಾಗಿರುತ್ತಿದ್ದೆವು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (K.S. Eshwarappa) ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ಸಚಿವ ಡಾ.ಎಂ.ಬಿ.ಪಾಟೀಲ ಹಿಂದೂ ಸಮಾಜವನ್ನು ಒಡೆಯುವಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎಂದು ಕಿಡಿಕಾರಿದರು.
ಸರಕಾರ ಮಾಡುವ ಕೆಲಸವನನ್ನು ಸಂಘ ಪರಿವಾರ ಮಾಡುತ್ತಿದೆ. ಸರಕಾರಕ್ಕೆ ಏಕೆ ಈ ಸಂಘ ಪರಿವಾರದ ಮೇಲೆ ದ್ವೇಷ ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರಿ ನೌಕರರು ಸಂಘ ಪರಿವಾರದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದರೆ ಏನರ್ಥ? ಕೋರ್ಟ್ ಸಹ ಸಂಘ ಪರಿವಾರ ರಾಜಕೀಯ ಸಂಘಟನೆ ಅಲ್ಲ ಎಂದು ಹೇಳಿದೆ. ಇದನ್ನು ಸಚಿವರು ಓದಿಲ್ಲವೇ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಹೇಳಿರೋ ಕೇಳೋರು ಯಾರು ಇಲ್ಲ, ಒಂದು ರೀತಿ ಅಪ್ಪ-ಅಮ್ಮ ಇಲ್ಲದ ಪಕ್ಷ, ಒಂದು ಕಡೆ ಮುಖ್ಯಮಂತ್ರಿ ಐದು ವರ್ಷ ನಾನೇ ಸಿಎಂ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಡಿ.ಕೆ.ಶಿವಕುಮಾರ ಅವರಿಗೆ ಸಿಎಂ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ ಎಂದು ಇನ್ನೊಬ್ಬರು ಹೇಳುತ್ತಾರೆ. ಆದರೆ ಡಿ.ಕೆ. ಶಿವಕುಮಾರ ಸುಮ್ಮನೆ ಕೂಡುವ ಕುಳ ಅಲ್ಲ ಎಂದು ವ್ಯಂಗ್ಯವಾಡಿದರು.
ಕಣ್ಣೀರಿ ಶ್ರೀ ಹಿಂದೂ ಸಮಾಜ ಒಂದುಗೂಡಿಸುವ ಸನ್ಯಾಸಿ. ಯಾರ ಮುಲಾಜಿಗೂ ಒಳಗಾಗೊಲ್ಲ. ಇಂತಹ ಸನ್ಯಾಸಿಗೆ ಅಗೌರವ ನೀಡುವ ದುಷಬುದಿ ಸರಕಾರಕ್ಕೆ ಏಕೆ ಬಂದಿತೋ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಣ್ಣೀರಿ ಶ್ರೀಗಳು ಒಂದೇ ಒಂದು ಕರೆ ಕೊಟ್ಟರೆ ರಾಜ್ಯದಲ್ಲಿಯೇ ಧಂಗೆ ಏಳುತ್ತದೆ, ಈ ಸರಕಾರದ ಅಂತಿಮ ಕ್ಷಣ ಆರಂಭವಾಗಿದೆ. ಕೂಡಲೇ ಶ್ರೀಗಳ ಮೇಲಿನ ಪ್ರವೇಶ ನಿಷೇಧ ಹಿಂದಕ್ಕೆ ಪಡೆಯಬೇಕು ಎಂದರು.