ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ (Veerendra Heggade) ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ (58th anniversary) ಹಿನ್ನೆಲೆಯಲ್ಲಿ ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಕೃತಜ್ಞತಾ ಭಾಷಣ ಮಾಡುವ ಸಮಯದಲ್ಲಿ ಧರ್ಮಾಧಿಕಾರಿಯವರು ಮುಂದೆ ತಾವು ಹಮ್ಮಿಕೊಳ್ಳಲು ಉದ್ದೇಶಿಸಿರುವ ಹಲವು ಯೋಜನೆಗಳ ಮಾಹಿತಿ ಹಂಚಿಕೊಂಡರು.
ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭ, ಎಂಆರ್‌ಐ ಘಟಕ ಸ್ಥಾಪನೆ, 1.35 ಲಕ್ಷ ಮದ್ಯವ್ಯಸನ ಮುಕ್ತರು ಭಾಗವಹಿಸುವ 2000ನೇ ಮದ್ಯವರ್ಜನ ಶಿಬಿರವನ್ನು ನ.6ಕ್ಕೆ ಧರ್ಮಸ್ಥಳದಲ್ಲಿ ಆಯೋಜಿಸುವುದು, ಧರ್ಮಸ್ಥಳದ ಅಶೋಕನಗರದಲ್ಲಿ 2 ಕೋಟಿ 41 ಲಕ್ಷ ರೂ. ರಾಜ್ಯಸಭಾ ಸದಸ್ಯರ ಅನುದಾನದಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ, ಬೀದಿದೀಪಗಳ ಅಳವಡಿಕೆ ಸೇರಿ ಹಲವು ಕಾಠ್ಯಕ್ರಮಗಳನ್ನು ಜಾರಿಗೆ ತರುವ ಆಲೋಚನೆ ಇದೆ ಎಂದರು.
ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಈಗಾಗಲೇ 300 ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ನಡೆಸಲಾಗಿದೆ.
1000 ಕೆರೆಗಳಿಗೆ ಕಾಯಕಲ್ಪ
ಮುಂದಿನ ವರ್ಷ 13 ದೇವಾಲಯಗಳ ಜೀರ್ಣೋದ್ಧಾರ ಹಮ್ಮಿಕೊಳ್ಳಲಾಗುವುದು, 2026ರ ಮಾರ್ಚ್ ಒಳಗೆ 1000 ಕೆರೆಗಳಿಗೆ ಕಾಯಕಲ್ಪ ನೀಡಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು.
ಬೆಳ್ತಂಗಡಿಯ 7 ಎಕರೆ ಜಾಗದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಲಾಗುವುದೆಂದು ಪ್ರಕಟಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ವಯ ಬಿ.ಸಿ.ಟ್ರಸ್ಟ್ ಮೂಲಕ 25.5 ಕೋಟಿ ರೂ. ವಿತರಿಸಲಾಗಿದೆ ಎಂದೂ ಧರ್ಮಾಧಿಕಾರಿ ವಿವರಿಸಿದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.