ದೊಡ್ಡಬಳ್ಳಾಪುರ; ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ತಾಲೂಕು ಕಚೇರಿಯಿಂದ ಮೆರವಣಿಗೆ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದರು.
ಅಂತೆಯೇ ರಾಜ್ಯ ರೈತ ಸಂಘದ ಕಾರ್ಯಕರ್ತರು ಸಹ ತಮಟೆಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನಕ್ಕೆ ತಿಮ್ಮಯ್ಯ ಅವರು ನಾಮಪತ್ರ ಸಲ್ಲಿಸಿದರು.
13 ನಿರ್ದೇಶಕ ಸ್ಥಾನಗಳಿಗೆ ಇಲ್ಲಿಯವರೆಗೆ ‘ಎ’ ತರಗತಿಯಿಂದ 13 ಹಾಗೂ ‘ಬಿ’ ತರಗತಿಯಿಂದ 45 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ಟಿಎಪಿಎಂಸಿಎಸ್ ರಂಗೇರಿದ್ದು ಸಾರ್ವತ್ರಿಕ ಚುನಾವಣೆಗಳನ್ನು ನೆನಪಿಸುವಂತಿತ್ತು. ನಾಮಪತ್ರ ಸಲ್ಲಿಕೆಗೂ ಬೃಹತ್ ಮೆರವಣಿಗೆ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ.
ಈಗಾಗಲೇ ಬಿಜೆಪಿ, ಜೆಡಿಎಸ್ ಬೆಂಬಲಿತ ಎನ್ದಿಎ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ತೂಬಗೆರೆ ಹೋಬಳಿಯ ಸಾಧುಮಠದಿಂದ ಅಧಿಕೃತವಾಗಿ ಪ್ರಚಾರ ಪ್ರಾರಂಭಿಸಿದ್ದಾರೆ.