ದೊಡ್ಡಬಳ್ಳಾಪುರ: ಮೊರಸು ಒಕ್ಕಲಿಗರು (Morasu Okkaligas) ಪೂರ್ವಿಕರ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಸ್ತ್ರೀ ಪ್ರಾಧಾನ್ಯತೆಯ ವಿಶಿಷ್ಟವಾದ ‘ಹೊಸದ್ಯಾವರ’ ಹಬ್ಬದಲ್ಲಿ (Hosadyavara habba) ತಮ್ಮ ಕುಲದೇವತೆ (ವೀರಗಾರಸ್ವಾಮಿ ದೇವರ)ರನ್ನು ತಾಲೂಕಿನ ಏಕಾಶಿಪುರದಲ್ಲಿ ಆರಾಧಿಸಿದರು.

ವೀರಗಾರಸ್ವಾಮಿ (ವೀರಣ್ಣೇಶ್ವರ) ದೇವಾರ ಆರಾಧನೆ ಅಥವಾ ‘ಹೊಸದ್ಯಾವರ’ ಹಬ್ಬವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿದರು.
ದೀಪಾವಳಿ ಮುಗಿದ ನಂತರ, ಬೆಳೆ ತೆನೆ ಕಟ್ಟುವ ಸಮಯದಲ್ಲಿ ಮೊರಸು ಒಕ್ಕಲಿಗರು ಪೂರ್ವ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದು, ಹಿರತನದ ಆಧಾರದಲ್ಲಿ ಸಡಗರದಿಂದ ಹೆಣ್ಣು ಮಕ್ಕಳೆಲ್ಲ ಒಂದೆಡೆ ಸೇರಿ ಹಬ್ಬದ ಆಚರಣೆ ಮಾಡಿದರು.

ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಉಪವಾಸವಿದ್ದು, ದೇವರಿಗೆ ವಿಶೇಷ ಅಲಂಕಾರ, ಪೂಜೆ ಸಲ್ಲಿಸಿ, ಬೆಳ್ಳಿ ಅನ್ನ, ಸಂಚಿಟ್ಟು, ತಂಬಿಟ್ಟು ನೈವೇದ್ಯ ಇಡಲಾಗುತ್ತದೆ.