ಚಿಕ್ಕಬಳ್ಳಾಪುರ: ಜಾಗತಿಕ ಸಂರಕ್ಷಣಾ ಸಂಸ್ಥೆಯಾದ ಅಂತರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN) ಮಹತ್ವದ ಐತಿಹಾಸಿಕ ನಿರ್ಣಯದಲ್ಲಿ ಮೋಷನ್ 007 – ಮಣ್ಣಿನ ಭದ್ರತಾ ಕಾಯಿದೆಯನ್ನು (Soil Security Law) ಅಂಗೀಕರಿಸಿದ್ದು, ವಿಶ್ವದ ಮೊದಲ ಮಾದರಿ ಮಣ್ಣಿನ ರಕ್ಷಣಾ ಕಾಯಿದೆಯೆನಿಸಿಕೊಂಡಿದೆ.
ಈ ಪ್ರಸ್ತಾವನೆಯನ್ನು ಮಣ್ಣು ಉಳಿಸಿ (ಈಶ ಔಟ್‌ರೀಚ್) ಅಭಿಯಾನ ಮತ್ತು ಪೇಸ್ ವಿಶ್ವವಿದ್ಯಾಲಯದ ಎಲಿಸಬೆತ್ ಹೌಬ್ ಲಾ ಶಾಲೆಯ ಗ್ಲೋಬಲ್ ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಲೀಗಲ್ ಸ್ಟಡೀಸ್ (ಅಮೇರಿಕಾ) ಸಹ ಪ್ರಾಯೋಜಿಸಿದ್ದು, ಆಸ್ಟ್ರೇಲಿಯಾದ ಔರೋರಾ ಸಾಯಿಲ್ ಸೆಕ್ಯುರಿಟಿ ಥಿಂಕ್ ಟ್ಯಾಂಕ್ ಸಹ ಪ್ರಮುಖ ಪಾತ್ರವಹಿಸಿದೆ.
007 ನಿರ್ಣಯವು ಮಣ್ಣಿಗೆ ದೊರೆತ ಐತಿಹಾಸಿಕ ಜಯವಾಗಿದ್ದು, ವಿಶ್ವದಾದ್ಯಂತ ಜನರು ಮಣ್ಣಿನ ಪರವಾಗಿ ಶ್ರಮ, ಪ್ರೀತಿ ಮತ್ತು ತ್ಯಾಗದಿಂದ ಮಾಡಿದ ಹೋರಾಟದ ಫಲ. ಮೊಟ್ಟ ಮೊದಲ ಬಾರಿಗೆ ಜಾಗತಿಕ ಸಂರಕ್ಷಣಾ ಸಂಸ್ಥೆಯೊಂದು ಮಣ್ಣಿನ ಭದ್ರತೆಯನ್ನು ಆಹಾರ, ನೀರು, ಜೀವವೈವಿಧ್ಯತೆ ಮತ್ತು ಹವಾಮಾನ ಸ್ಥೈರ್ಯತೆಗೆ ಆಧಾರವೆಂದು ಅಧಿಕೃತವಾಗಿ ಗುರುತಿಸಿದೆ.
ಇದರಿಂದ ವಿಶ್ವದಾದ್ಯಂತ ಇನ್ನಷ್ಟು ಪ್ರಬಲ ಕಾನೂನಾತ್ಮಕ ಮಣ್ಣು ಸಂರಕ್ಷಣಾ ವಿಧಾನಗಳು ರೂಪುಗೊಳ್ಳಲಿವೆ. ಎಂದು ಮಣ್ಣು ಉಳಿಸಿ ಅಭಿಯಾನದ ಮುಖ್ಯ ವಿಜ್ಞಾನ ಮತ್ತು ತಾಂತ್ರಿಕ ಅಧಿಕಾರಿಗಳಾದ ಪ್ರವೀನಾ ಶ್ರೀಧರ್ ಅವರು ಹೇಳಿದರು.
ಈ ಐತಿಹಾಸಿಕ ನಿರ್ಣಯದ ಹಿನ್ನೆಲೆಯಲ್ಲಿ ಸದ್ಗುರುಗಳು Xನಲ್ಲಿ “ಇದು ಮಣ್ಣಿನ ಸಮಗ್ರ ಮತ್ತು ಬದ್ಧತೆಯಿಂದ ಕೂಡಿದ ರಕ್ಷಣೆಯ ಅಗತ್ಯತೆಯನ್ನು ಜಾಗತಿಕವಾಗಿ ಗುರುತಿಸುವ ಮಹತ್ವದ ಹೆಜ್ಜೆ. ಈಗ ನಿಜವಾದ ಕೆಲಸ ಆರಂಭವಾಗಲಿದೆ — ಮಣ್ಣಿಗಾಗಿ, ರೈತರಿಗಾಗಿ, ಎಲ್ಲಾ ಜೀವಿಗಳಿಗಾಗಿ ಮತ್ತು ನಮ್ಮ ಭವಿಷ್ಯಕ್ಕಾಗಿ ಎಲ್ಲರೂ ಕೂಡಿಬರೋಣ.”
ಈಶ ಫೌಂಡೇಶನ್ ನ ಪರವಾಗಿ IUCN ಸದಸ್ಯತ್ವಕ್ಕೆ, ಪ್ರಸ್ತಾಪಕರಿಗೆ, ಮಣ್ಣು ಉಳಿಸಿ ಅಭಿಯಾನವನ್ನೊಳಗೊಂಡಂತೆ ಸಹ ಪ್ರಾಯೋಜಕರಿಗೆ ಹಾಗೂ ಅಬುಧಾಬಿಯ ವಿಶ್ವ ಸಂರಕ್ಷಣಾ ಮಹಾಸಭೆಯಲ್ಲಿ ಶ್ರಮಿಸಿದ ಎಲ್ಲ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು.
Congratulations to the @IUCN Membership for adopting Resolution 007 on a Soil Security Law, and to the proponents, co-sponsors – including Save Soil – supporters, and volunteers who championed this effort at the World Conservation Congress in Abu Dhabi. This is a significant step… https://t.co/FZsNwhyFZ1
— Sadhguru (@SadhguruJV) October 26, 2025
007ನಿರ್ಣಯದ ಅಂಗೀಕಾರದೊಂದಿಗೆ IUCN ಈಗ ಮಣ್ಣಿನ ಭದ್ರತೆಯ ಕುರಿತು ಅಂತರಾಷ್ಟ್ರೀಯ ಒಪ್ಪಂದ ಅಥವಾ ಕಾನೂನು ಸಾಧನ ರೂಪಿಸಲು ಕಾರ್ಯಸಮಿತಿಯನ್ನು ರಚಿಸಲಿದ್ದು, ಅದರಿಂದ ಮಾದರಿ ಮಣ್ಣಿನ ಭದ್ರತಾ ಕಾಯಿದೆ ರೂಪಗೊಳ್ಳಲಿದೆ. ಇದನ್ನು 90ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಚೌಕಟ್ಟಿನಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು.
ಮಾದರಿ ಮಣ್ಣಿನ ಭದ್ರತಾ ಕಾಯಿದೆ ರಾಷ್ಟ್ರ ಮಟ್ಟದಲ್ಲಿ ಮಣ್ಣಿನ ಸಂರಕ್ಷಣಾ ಕ್ರಮಗಳನ್ನು ಕೃಷಿ, ಹವಾಮಾನ ಮತ್ತು ಪರಿಸರ ನೀತಿಗಳಲ್ಲಿ ಅಳವಡಿಸಿಕೊಳ್ಳಲು ಮಾರ್ಗದರ್ಶಿಯಾಗಲಿದೆ. ರೈತರ ಜೀವನೋಪಾಯವನ್ನು ರಕ್ಷಿಸುವುದರ ಜೊತೆಗೆ ಪರಿಸರದ ಮೂಲಾಧಾರವಾದ ಮಣ್ಣಿನ ಜೀವಶಕ್ತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಸುಭದ್ರಗೊಳಿಸುವುದು ಇದರ ಉದ್ದೇಶವಾಗಿದೆ.
2025ರ ಜನವರಿಯಿಂದಲೇ ಮಣ್ಣು ಉಳಿಸಿ ಅಭಿಯಾನ ಮತ್ತು ಅದರ ಸಹಭಾಗಿಗಳು ಫ್ರಾನ್ಸ್, ಜರ್ಮನಿ, ಜಪಾನ್, ಮತ್ತು ಕೆನಡಾ ಸೇರಿದಂತೆ ಅನೇಕ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಅನೇಕ ಚರ್ಚೆ ಮತ್ತು ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡು, ಸಮಗ್ರ ಕಾನೂನಾತ್ಮಕ ಮಣ್ಣು ಸಂರಕ್ಷಣೆಯ ಅಗತ್ಯತೆ ಕುರಿತು ಜಾಗತಿಕ ಜಾಗೃತಿ ಅಭಿಯಾನಗಳನ್ನು ಆಯೋಜಿಸಿದ್ದರು.
ಅಬುಧಾಬಿಯಲ್ಲಿ ನಡೆದ ಇತ್ತೀಚಿನ IUCN ಮಹಾಸಭೆಯಲ್ಲಿ, ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕರು ಮತ್ತು ಸಹಭಾಗಿಗಳು ಮಣ್ಣಿನ ಭದ್ರತಾ ಕಾಯ್ದೆಯ ಪ್ರಸ್ತಾವನೆಗಾಗಿ ಅವಿಶ್ರಾಂತ ಅಭಿಯಾನ ನಡೆಸಿದರು. 87.1% ಸರ್ಕಾರಿ ಸದಸ್ಯರು, 95.45% ಎನ್‌ಜಿಒ ಮತ್ತು ಆದಿವಾಸಿ ಗುಂಪುಗಳು ಇದರ ಪರವಾಗಿ ಮತಹಾಕಿದ ಪರಿಣಾಮವಾಗಿ IUCN ಸದಸ್ಯರು ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಿದರು.