ಬೆಂಗಳೂರು: ಅಭಿಮಾನಿಗಳ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ 4 ವರ್ಷ ಕಳೆದಿದ್ದು, ಪುನೀತ್ ರಾಜ್‍ಕುಮಾರ್ (Puneeth Rajkumar) ಅಭಿಮಾನಿಗಳು ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಕನ್ನಡ ಚಲನಚಿತ್ರರಂಗದ ಅಪಾರ ಅಭಿಮಾನಿಗಳ ಹೃದಯಗಳಲ್ಲಿ ಸದಾ ಜೀವಂತನಾಗಿ ಉಳಿದಿರುವ ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ರಾಜ್‌ಕುಮಾರ್ ಕುಟುಂಬ ಸದಸ್ಯರು ಭಕ್ತಿಭಾವಪೂರ್ಣವಾಗಿ ಪೂಜೆ ನೆರವೇರಿಸಿದರು.
ಪುನೀತ್ ಅವರ ಸಮಾಧಿ ಸ್ಥಳವಾದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಬೆಳಿಗ್ಗೆ ಪೂಜೆ, ಹೂವಿನ ಅಲಂಕಾರ ಮಾಡಿದ್ದು, ಇದೀಗ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಅಣ್ಣ ಶಿವರಾಜ್‌ಕುಮಾರ್, ಸೇರಿದಂತೆ ಕುಟುಂಬದವರು, ಆಪ್ತ ಬಂಧುಗಳು ಹಾಗೂ ಅಭಿಮಾನಿಗಳು ಭಾವನಾತ್ಮಕವಾಗಿ ನಮನ ಸಲ್ಲಿಸಿದರು.
ಅಭಿಮಾನಿಗಳ ದಟ್ಟಣೆ ಕಂಠೀರವ ಆವರಣದಲ್ಲಿ ಕಂಡುಬಂದಿದ್ದು, “ಅಪ್ಪು” ಎಂದೇ ಕರೆಸಿಕೊಂಡ ಪುನೀತ್ ಅವರನ್ನು ನೆನಸಿಕೊಂಡು ಕಣ್ಣೀರಿಟ್ಟರು.
ಇನ್ನು ಅಪ್ಪು ಅವರ ಪುಣ್ಯಸ್ಮರಣೆಯ ಹಿನ್ನಲೆ ಕಂಠೀರವ ಸ್ಟುಡಿಯೋ ಇಂದು ಇಡೀ ದಿನ ಅನ್ನಸಂತರ್ಪಣೆ ಜೊತೆಗೆ ನೇತ್ರದಾನ, ರಕ್ತದಾನ ಶಿಬಿರಗಳ ಆಯೋಜನೆ ಮಾಡಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ವಿವಿಧ ಹೂಗಳಿಂದ ಶೃಂಗರಿಸಲಾಗಿದೆ.
ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಲು ಅಪಾರ ಸಂಖ್ಯೆಯ ಸಮಾಧಿಯತ್ತ ಆಗಮಿಸುತ್ತಿದ್ದಾರೆ. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.