
ದೊಡ್ಡಬಳ್ಳಾಪುರ: ಕರ್ನಾಟಕ (Karnataka) ಇದು ಬರಿ ನಾಡಲ್ಲ. ಇದೊಂದು ದೇವಾಲಯ, ಈ ದೇವಾಲಯದಲ್ಲಿ ಅನೇಕ ಆಚಾರ ವಿಚಾರಗಳಿವೆ. ನಡೆ-ನುಡಿ ಶುದ್ಧವಾಗಿದೆ ಎಂದು ಜನಪ್ರಿಯ ವಿಜ್ಞಾನ ಬರಹಗಾರ ಹಾಗೂ ಕನ್ನಡ ಸಂವರ್ಧಕರಾದ ಎಂ.ಓ.ಆವಲಮೂರ್ತಿ ಹೇಳಿದರು.
ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ ಇಂದು ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ವಾರ್ಷಿಕ ಕ್ರೀಡಾ ಕೂಟ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಭಾಗವಹಿಸಿ ಮಾತನಾಡಿದರು.
ಕನ್ನಡಿಗರ ಮನಸ್ಸು ಬಹಳ ನಿರ್ಮಲವಾಗಿದೆ. ಅಷ್ಠೇ ಅಲ್ಲದೆ ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ಸೌಹಾರ್ದತೆಯಿಂದ ಕೂಡಿರುವ ನಾಡಾಗಿದೆ. ಇಲ್ಲಿರುವ ಎಲ್ಲರೂ ಯಾವುದೇ ಬೇಧಭಾವವಿಲ್ಲದೆ ಬಹಳ ಹೆಮ್ಮೆಯಿಂದ, ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವೆಂದರೆ ಅದುವೆ ಕನ್ನಡ ರಾಜ್ಯೋತ್ಸವವಾಗಿದೆ ಎಂದರು.
“ಕನ್ನಡ ಕೇವಲ ಭಾಷಣಕ್ಕೆ ಮತ್ತು ನವಂಬರ್ ಗೆ ಸೀಮಿತವಾಗದೆ ದೈನಂದಿನ ಚಟುವಟಿಕೆ ಹಾಗೂ ವಾಡಿಕೆಯಲ್ಲಿ ಅಳವಡಿಸಿಕೊಳ್ಳಬೇಕು. 14 ವರ್ಷದೊಳಗೆ ಕಲಿಯುವ ಸಂಸ್ಕಾರ, ಸಂಸ್ಕೃತಿ ನಮ್ಮ ಜೀವನದುದ್ದಕ್ಕೂ ಇರುತ್ತದೆ. ಹಾಗಾಗಿ ಮಕ್ಕಳು ಉತ್ತಮ ವಿದ್ಯೆ, ಜೀವನ ಶೈಲಿ ಹಾಗೂ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡದ ಉಳಿವು ಕೇವಲ ದೈನಂದಿನ ಬಳಕೆಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಸಹಿಯನ್ನೂ ಸಹ ಕನ್ನಡದಲ್ಲೇ ಮಾಡುವುದನ್ನು ಕಲಿಯಬೇಕು. ಹಾಗೂ ಸಾಧ್ಯವಾದಷ್ಟೂ ಕನ್ನಡ ಪುಸ್ತಕಗಳನ್ನು ಓದುವುದರಿಂದ ಶಬ್ದಭಂಡಾರ ಹೆಚ್ಚಾಗುತ್ತದೆ ಎಂಬ ಕಿವಿ ಮಾತನ್ನು ಹೇಳಿದರು.
ಶಾಲೆಯ ಅಧ್ಯಕ್ಷರಾದ ಎ.ಸುಬ್ರಮಣ್ಯ ಮಾತನಾಡಿ, 1956ಕ್ಕಿಂದ ಹಿಂದಿನ ಕರ್ನಾಟಕದ ಸ್ಥಿತಿ ಗತಿಗಳನ್ನು ಹಾಗೂ ಕರ್ನಾಟಕ ಏಕೀಕರಣ, ಚಳುವಳಿ ಅದರ ಏಳು ಬೀಳುಗಳು, ಆಲೂರು ವೆಂಕಟರಾಯರ ಕಾಣಿಕೆಗಳು ಅವರು ಹುಟ್ಟು ಹಾಕಿದ ಏಕೀಕರಣದ ಚಳುವಳಿಯ ಬಗ್ಗೆ ತಿಳಿಸಿದರು.
ಅಲ್ಲಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಲು ಅಂದಿನ ಕನ್ನಡಿಗರು ಮಾಡಿದ ಹೋರಾಟದ ಮಹತ್ವಗಳ ಬಗ್ಗೆ ತಿಳಿಸಿದರು. ಕನ್ನಡ ನುಡಿ, ಜಲ, ಸಂಪತ್ತಿನ ಸಂರಕ್ಷಣೆಗಾಗಿ ನಾವೆಲ್ಲಾ ಸದಾ ಸಿದ್ಧರಿರಬೇಕು ಎಂಬ ಪಣ ತೊಟ್ಟಾಗ ನಮ್ಮ ನಾಡು ಮತ್ತಷ್ಠು ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಕನ್ನಡ ನಾಡಿನಲ್ಲಿ ಆಳ್ವಿಕೆ ಮಾಡಿದ ರಾಜ ಮಹಾರಾಜರ ಆಳ್ವಿಕೆಯ ಕಾಲ, ವಾಸ್ತುಶಿಲ್ಪಗಳ ಬಗ್ಗೆ ಹಾಗೂ ರಾಜ್ಯಾಡಳಿತದ ವೈಖರಿಯ ಬಗ್ಗೆ ತಿಳಿಸುತ್ತಾ, ವಿಷ್ಣುವರ್ಧನ ಹಾಗೂ ಕೃಷ್ಣದೇವರಾಯರ ಆಳ್ವಿಕೆಯ ಕಾಲದಲ್ಲಿ ಕನ್ನಡ ನಾಡು ಎಷ್ಟು ಶ್ರೀಮಂತಿಕೆಯಿಂದ ಕೂಡಿತ್ತು ಎಂಬ ವಿಚಾರಗಳನ್ನು ಶಾಲೆಯ ಉಪಾಧ್ಯಕ್ಷ ಸ್ವರೂಪ್ ಎಸ್ ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ರೆಮ್ಯ ಬಿ.ವಿ. ಮಾತನಾಡಿ ಕನ್ನಡ ನಾಡಿನಲ್ಲಿರುವ ಐತಿಹಾಸಿಕ ಸ್ಥಳಗಳ ಮಾಹಿತಿ ಹಾಗೂ ಅವುಗಳ ಮಹತ್ವವನ್ನು ತಿಳಿಸಿ, ಈ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸುವುದರಿಂದ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿಯ ಭವ್ಯತೆಯ ಬಗ್ಗೆ ಅರಿವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಶಾಲೆಯ ವಾರ್ಷಿಕ ಕ್ರೀಡಾ ಕೂಟ ಶಾಲಾ ಆವರಣದಲ್ಲಿ ನೆರವೇರಿತು.

ಮಕ್ಕಳು ಪ್ರದರ್ಶಿಸಿದ ಟೇಕ್ವಾಂಡೋ, ಯೋಗ ಪ್ರದರ್ಶನ, ಡ್ರಿಲ್ ನೆರೆದಿದ್ದ ಪೋಷಕರ ಮನಸೆಳೆದವು.
ಮುಖ್ಯ ಅತಿಥಿಗಳು ಜ್ಯೋತಿಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಪುಟಾಣಿ ಮಕ್ಕಳ ಮ್ಯಾರಾಥಾನ್ ನಡುವೆ ಕ್ರೀಡಾ ಜ್ಯೋತಿ ಪ್ರಜ್ವಲನದ ನಂತರ ಕ್ರೀಡಾ ಕೂಟ ಆರಂಭವಾಯಿತು.

ಓಟದ ಸ್ಪರ್ಧೆ, ರಿಲೇ, ಕಬ್ಬಡ್ಡಿ, ವಾಲಿಬಾಲ್, ಥ್ರೋಬಾಲ್, ಉದ್ದ ಜಿಗಿತ, ಗುಂಡುಎಸೆತ, ತಟ್ಟೆ ಎಸೆತೆ ಹೀಗೆ ಮೊದಲಾದ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಿದರು.
ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಶಾಲೆಯ ವಿವಿಧ ತಂಡಗಳಾದ ಅಗ್ನಿ, ಆಕಾಶ್, ಪೃಥ್ವಿ, ಸೂರ್ಯ ತಂಡದ ಮಕ್ಕಳ ಶಿಸ್ತುಬದ್ಧ ಪಥಸಂಚಲನ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.
ಶಾಲೆಯ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್ ಎಸ್., ಟ್ರಸ್ಟಿ ನಯನಾ ಸ್ವರೂಪ್ ಹಾಗೂ ಸಿಬ್ಬಂದಿ ವರ್ಗ ಪ್ರಶಸ್ತಿ ಪಡೆದ ಮಕ್ಕಳನ್ನು ಅಭಿನಂದಿಸಿದರು.