
ಬೆಂಗಳೂರು: ಚಿಕ್ಕವಯಸ್ಸಿನಲ್ಲೇ ಪ್ರೀತಿ ಏಕೆ ಎಂಬ ಕುರಿತು ಬುದ್ದಿ ಹೇಳಿದ ಕಾರಣಕ್ಕೆ ಅಪ್ರಾಪ್ತ ಮಗಳೇ ತನ್ನ ಹೆತ್ತ ತಾಯಿಯನ್ನೇ ಹತ್ಯೆಗೈದಿರುವ (Murder) ಅಮಾನುಷ ಘಟನೆ ನಗರದ ಉತ್ತರಹಳ್ಳಿಯಲ್ಲಿ ನಡೆದಿದೆ.
ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಅಪ್ರಾಪ್ತ ಮಗಳೇ ತನ್ನ ತಾಯಿ ನೇತ್ರಾವತಿಯನ್ನು ಹತ್ಯೆಗೈದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಮಗಳು ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಎಂದು ಅಂತ ಹುಡುಗನ ಜತೆ ಓಡಾಡುವುದನ್ನು ನೋಡಿದ ತಾಯಿ ಮಗಳಿಗೆ ಬುದ್ದಿವಾದ ಹೇಳಿದ್ದಾಳೆ. ತಾಯಿ ಬುದ್ದಿಮಾತು ಹೇಳಿದ್ದಕ್ಕೆ ತಾಯಿಯನ್ನೇ ತನ್ನ ಪ್ರಿಯತಮನ ಜತೆ ಸೇರಿ ಹತ್ಯೆಗೈದಿದ್ದಾಳೆ ಎನ್ನಲಾಗಿದೆ.
ನೇತ್ರಾವತಿಯ ಮಗಳ ಜತೆ ಸೇರಿ ಕೊಲೆಗೈದ ಆರೋಪದ ಮೇಲೆ ಪೊಲೀಸರು ಐವರು ಅಪ್ರಾಪ್ತರನ್ನು ಬಂಧಿಸಿದ್ದಾರೆ.
ಕಳೆದ ಶನಿವಾರವೇ ನೇತ್ರಾವತಿಯನ್ನು ಆಕೆಯ ಅಪ್ರಾಪ್ತ ಮಗಳು ಹಾಗೂ ಉಳಿದ ನಾಲ್ಕು ಮಂದಿ ಅಪ್ರಾಪ್ತ ಹುಡುಗರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದರಂತೆ.
ಬೆಂಗಳೂರಿನ ಸುಬ್ರಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಈ ಕೊಲೆ ನಡೆದಿತ್ತು. ನೇತ್ರಾವತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು. ಬಳಿಕ ನೇಣು ಹಾಕಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನೇತ್ರಾವತಿ ಸಾವು ಅನ್ನು ಆತ್ಮಹತ್ಯೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ನೇತ್ರಾವತಿಯ ಶವ ಸಂಸ್ಕಾರ ಆದ ಬಳಿಕ ಮಗಳು ಮನೆಯಲ್ಲಿ ಇರಲಿಲ್ಲ. ತನ್ನ ತಂಗಿ ಸಾವಿಮ ಬಳಿಕ ಮಗಳು ಎಲ್ಲೂ ಕಾಣಿಸುತ್ತಿಲ್ಲ ಎಂದು ನೇತ್ರಾವತಿಯ ಅಕ್ಕ ಅನಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನೇತ್ರಾವತಿ ಸಾವನ್ನಪ್ಪಿದ 2 ದಿನದ ಬಳಿಕ ಮಗಳು ಮನೆಗೆ ವಾಪಸ್ ಬಂದಿದ್ದಳು. ನಾನು ಅವತ್ತು ತಾಯಿ ಮನೆಗೆ ಹೋಗಿದ್ದೆ. ಐದು ಜನ ಸ್ನೇಹಿತರನ್ನು ಗಮನಿಸಿದೆ. ಟವಲ್‌ನಲ್ಲಿ ಕುತ್ತಿಗೆ ಬಿಗಿದು ನೇಣು ಹಾಕಿದ್ದನ್ನು ನೋಡಿದ್ದೆ. ನಂತರ ನನಗೆ ಬೆದರಿಕೆ ಹಾಕಲಾಗಿತ್ತು ಭಯಪಟ್ಟು ಫ್ರೆಂಡ್ ಮನೆಗೆ ತೆರಳಿದ್ದೆ ಎಂದು ಮಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಳಂತೆ.
ಪೊಲೀಸರಿಗೆ ಅನುಮಾನ ಬಂದು, ವಿಚಾರಣೆ ನಡೆಸಿದಾಗ, ತಾಯಿ ನೇತ್ರಾವತಿಯನ್ನು ಅಪ್ರಾಪ್ತ ಮಗಳೇ ತನ್ನ ಪ್ರಿಯತಮ ಹಾಗೂ ಉಳಿದವರ ಜತೆ ಸೇರಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಮಗಳೇ ತಾಯಿಯನ್ನು ಹತ್ಯೆ ಮಾಡಿದ್ದಾಳೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ವರದಿಯಾಗಿದೆ.