
ಬೆಂಗಳೂರು: ರಾಜ್ಯಾಧ್ಯಂತ ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ (Social, Educational and Economic Survey) ನಿನ್ನೆಗೆ (ಅ.31) ತೆರೆ ಬಿದ್ದಿದೆ.
ಕಳೆದ ಒಂದು ತಿಂಗಳಿನಿಂದ ನಡೆದ ಮನೆ ಮನೆ ಗಣತಿ ಕೊನೆಗೂ ಮುಗಿದಿದೆಯಾದರೂ, ನವೆಂಬರ್ 10ರ ತನಕ ಆನ್‌ಲೈನ್ ಸಮೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ.
ಶೇ.97.51 ರಷ್ಟು ಸಮೀಕ್ಷೆ ಪೂರ್ಣ
ರಾಜ್ಯಾದ್ಯಂತ ಇಲ್ಲಿಯವರೆಗೆ 6,85,3800 ಜನರಲ್ಲಿ 6,13,83,908 (ಶೇ.97.51) “ಜಿಬಿಎ ಬಿಟ್ಟು” ರಷ್ಟು ಸಮೀಕ್ಷೆ ನಡೆದಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ಮಾಹಿತಿ ನೀಡಿದೆ.
ಮಾಹಿತಿಗಳ ಪ್ರಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 59 ಲಕ್ಷ ಜನರ ಸಮೀಕ್ಷೆ ಆಗಿರುವ ಸಾಧ್ಯತೆ ಇದೆ. ಇನ್ನು ರಾಜ್ಯಾದ್ಯಂತ 1.22 ಲಕ್ಷ ಸಿಬ್ಬಂದಿಯಿಂದ ಈ ಸಮೀಕ್ಷೆ ನಡೆದಿದೆ.
ಇದರಲ್ಲಿ 4,22,258 ಮಂದಿ ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಖಾಲಿ/ ಬಾಗಿಲು ಮುಚ್ಚಿದ ಮನೆಗಳು 34,49,681 ಎಂದು ಪ್ರಕಟಣೆಯಲ್ಲಿ ಹೇಳಿದೆ.

ಈ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯದ ವಿಚಾರದಲ್ಲಿ ಅನೇಕ ಗೊಂದಲಗಳು ವರದಿಯಾಗಿದ್ದರೂ ಸಹ, ನಂತರ ಸರಾಗವಾಗಿ ಸಮೀಕ್ಷೆ ಮಾಡಲಾಗಿದೆ.
ಹಾಗೆಯೇ, ಈ ಸಮೀಕ್ಷೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಲು ಇನ್ನೂ ಅವಕಾಶ ನೀಡಲಾಗಿದ್ದು, ಯಾವುದೇ ವದಂತಿಗಳಿಗೆ ಕಿವಿ ಕೊಡದೆ ಗಣತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಯೋಗ ಜನರಲ್ಲಿ ಮನವಿ ಮಾಡಿದೆ.
ಸೆಪ್ಟೆಂಬರ್ 22 ರಿಂದ ಆರಂಭವಾಗಿದ್ದ ಜಾತಿ ಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ ಸಮೀಕ್ಷೆ ಪೂರ್ತಿಯಾಗಿ ಆಗದ ಕಾರಣ ಅದನ್ನ ವಿಸ್ತರಣೆ ಮಾಡಲಾಗಿತ್ತು. ಆದರೆ ಇಂದಿಗೆ ಸಮೀಕ್ಷೆ ಕೊನೆಯಾಗಿದ್ದು, ಯಾವುದೇ ರೀತಿಯ ವಿಸ್ತರಣೆ ಮಾಡಲಾಗಿಲ್ಲ.