ದೊಡ್ಡಬಳ್ಳಾಪುರ: 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (Rajyotsava Award) ಪುರಸ್ಕೃತ ಸಿಂಪಾಡಿಪುರ ಗ್ರಾಮದ ವೀಣೆ ತಯಾರಕ ಪೆನ್ನ ಓಬಳಯ್ಯ ನಿಧನದ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಉಪಾಧ್ಯಕ್ಷ ಟಿ. ವೆಂಕಟರಮಣಯ್ಯ (T. Venktaramanaia ಅವರು ಅಂತಿಮ ನಮನ ಸಲ್ಲಿಸಿದರು.
ತಾಲೂಕಿನ ಮಧುರೆ ಹೋಬಳಿ ಸಿಂಪಾಡಿಪುರಕ್ಕೆ ಭೇಟಿ ನೀಡಿದ ಟಿ.ವೆಂಕಟರಮಣಯ್ಯ ಅವರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆನ್ನ ಓಬಳಯ್ಯ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಮಾತಾಡಿದ ಟಿ.ವೆಂಕಟರಮಣಯ್ಯ, ಇಡೀ ಪ್ರಪಂಚಕ್ಕೆ ವೀಣೆಯ ನಾದದ ಕಂಪನ ಹರಡಿಸಿದ ಪೆನ್ನ ಓಬಳಯ್ಯ ಅವರು, ಹೊರ ರಾಜ್ಯಕ್ಕೆ ತೆರಳಿ ವೀಣೆ ತಯಾರಿಕೆಯನ್ನು ಕಲಿತು, ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿ ಪುರದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಜೀವನ ಆಧಾರವಾಗುವಂತೆ ಮಾಡಿದ್ದಾರೆ.
ಭಾರತದಲ್ಲಿ ತಮಿಳುನಾಡಿನ ತಂಜಾವೂರು ಮತ್ತು ಕರ್ನಾಟಕದ ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದಲ್ಲಿನ ವೀಣೆ ತಯಾರಿಗೆ ಪ್ರಸಿದ್ದಿ ಹೊಂದಿವೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದ ಕೀರ್ತಿಯನ್ನು ವೀಣೆಯ ನಾದದ ಮೂಲಕ ಇಡೀ ವಿಶ್ವಕ್ಕೆ ಸಾರಿದ ಕೀರ್ತಿ ಪೆನ್ನ ಓಬಳಯ್ಯ ಅವರದ್ದಾಗಿದೆ.
ಅವರ ಈ ಸಾಧನೆಯನ್ನು ಮೆಚ್ಚಿ ಕರ್ನಾಟಕ ಸರ್ಕಾರ ಅವರಿಗೆ ಕರ್ನಾಟಕ ರಾಜ್ಯೋತ್ಸವದಂದು ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿ, 5 ಲಕ್ಷ ನಗದು ಬಹುಮಾನ ನೀಡಿ ಪುರಸ್ಕರಿಸಿದೆ.
ಆದರೆ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಬದುಕಿನ ಪಯಣ ಮುಗಿಸಿದ ಪೆನ್ನ ಓಬಳಯ್ಯ ಸಂಗೀತ ಕ್ಷೇತ್ರಕ್ಕೆ, ದೊಡ್ಡಬಳ್ಳಾಪುರ ತಾಲ್ಲೂಕಿಗೆ ತುಂಬಲಾರದ ನಷ್ಟವಾಗಿದೆ.
ಮೃತ ಪೆನ್ನ ಓಬಳಯ್ಯ ಆತ್ಮಕೆ ಶಾಂತಿಯನ್ನು ಕರುಣಿಸಲಿ ಮತ್ತು ದುಃಖತಪ್ತ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ನೀಡಲೆಂದು ಟಿ.ವೆಂಕಟರಮಣಯ್ಯ ಪ್ರಾರ್ಥಿಸಿದ್ದಾರೆ.