ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಪ್ರಯಾಣಿಕರಿಗೆ ಸಾರಿಗೆ ಬಸ್ (KSRTC) ಸಮಸ್ಯೆ ನಗರದಲ್ಲಿ ಮತ್ತೆ ಎದುರಾಗಿದ್ದು, ಮುಗಿಬಿದ್ದು ಬಸ್ ಹತ್ತಬೇಕಾದ ಅನಿವಾರ್ಯತೆ ಉಂಟಾಗಿದೆ.
ದೊಡ್ಡಬಳ್ಳಾಪುರದಿಂದ ಬೆಂಗಳೂರು ಕಡೆಗೆ ತೆರಳುವ ಬಸ್ಸುಗಳು ನಿಗದಿತ ಸಮಯಕ್ಕೆ ಬಾರದೆ ಇರುವ ಕಾರಣ ವಿದ್ಯಾರ್ಥಿಗಳು, ನೌಕರರು ಪರದಾಡಬೇಕಾಗಿದೆ.
ಬೆಳಗ್ಗೆ 7 ರಿಂದ 9 ಗಂಟೆಯ ಒಳಗೆ ನಿಗದಿ ಸಮಯದಲ್ಲಿ ಬಸ್ಸುಗಳು ಬಾರದೆ ಇರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗುತ್ತಿದೆ.
ಚಾಲಕರು, ನಿರ್ವಾಹಕರ ಕೊರತೆ, ಇತರ ನಗರಗಳಿಂದ ಬರುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವ ಕಾರಣ, ಉದ್ಯೋಗ, ಕಾಲೇಜುಗಳಿಗೆಂದು ಬೆಂಗಳೂರಿಗೆ ತೆರಳಬೇಕಾದ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಿರಿಯ ಅಧಿಕಾರಿಗಳು, ಉಪನ್ಯಾಸಕರಿಂದ ಮಾತು ಕೇಳಬೇಕಾದ ಅನಿವಾರ್ಯತೆ ಉಂಟಾಗಿದೆ.
ಕಳೆದ ಒಂದು ವಾರದಿಂದ ದೊಡ್ಡಬಳ್ಳಾಪುರದಲ್ಲಿ ಈ ಸಮಸ್ಯೆ ಮತ್ತೆ ಉಲ್ಬಣವಾಗಿದ್ದು, ಬಸ್ಸು ತಪ್ಪುವ ಆತಂಕದಿಂದ, ಬಸ್ ನಿಲ್ದಾಣಕ್ಕೆ ಬರುವ ಮುನ್ನವೇ ಗೇಟ್ ಬಳಿ ಬಸ್ಸನ್ನು ತಡೆದು ಮುಗಿಬಿದ್ದು ಬಸ್ಸನ್ನು ಹತ್ತಬೇಕಾದ ಪರಿಸ್ಥಿತಿ ಉಂಟಾಗಿದ್ದು, ಆಯತಪ್ಪಿ ಬಿದ್ದರೆ ದೊಡ್ಡ ಸಮಸ್ಯೆ ಎದುರಾಗುವ ಆತಂಕ ಕಂಡು ಬರುತ್ತಿದೆ.
ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಸ್ ನಿಲ್ದಾಣಕ್ಕೆ ಬರುವಂತೆ ಕ್ರಮಕೈಗೊಳ್ಳ ಬೇಕೆಂದು ವಿದ್ಯಾರ್ಥಿಗಳು, ನೌಕರರು ಒತ್ತಾಯಿಸಿದ್ದಾರೆ.